ಬಂಟ್ವಾಳ:ಬಂಟ್ವಾಳ -ಮೂಡುಬಿದ್ರೆ ರಸ್ತೆಯ ಬೈಪಾಸ್ ಎಂಬಲ್ಲಿ ಅಡಿಕೆ ವ್ಯಾಪಾರಿಯೊಬ್ಬರು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ರೂ 2.5ಲಕ್ಷ ಮೌಲ್ಯದ ಒಟ್ಟು 16 ಗೋಣಿ ಅಡಿಕೆ ಕಳುವಾಗಿರುವ ಘಟನೆ ಸೋಮವಾರ ಮುಂಜಾನೆ ನಡೆದಿದ್ದು, ಬಂಟ್ವಾಳ ನಗರ ಪೊಲೀಸರು ಕಳ್ಳರ ಪತ್ತೆಗೆ ವ್ಯಾಪಕ ತನಿಖೆ ಆರಂಭಿಸಿದ್ದಾರೆ.
ಇಲ್ಲಿನ ಉದ್ಯಮಿ ಹರೀಶ ಶೆಟ್ಟಿ ಎಂಬವರ ಕಟ್ಟಡದಲ್ಲಿ ಕಳೆದ ಹಲವು ವರ್ಷಗಳಿಂದ ಪುತ್ತೂರಿನ ಯಾಸೀರ್ ಎಂಬವರು ‘ಬಂಟ್ವಾಳ ಸುಪಾರಿ’ ಹೆಸರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಇವರು ಶನಿವಾರ ಸಂಜೆ ಎಂದಿನಂತೆ ಅಡಿಕೆ ಖರೀದಿವ್ಯವಹಾರ ಮುಗಿಸಿದ ಬಳಿಕ ಗೋದಾಮಿಗೆ ಕೇಂದ್ರ ಬೀಗ (ಸೆಂಟ್ರಲ್ ಲಾಕ್) ಸಹಿತ ಒಟ್ಟು ಐದು ಬೀಗ ಹಾಕಿ ಸಿಬ್ಬಂದಿಗಳ ಜೊತೆಗೆ ಮನೆಗೆ ತೆರಳಿದ್ದರು ಎನ್ನಲಾಗಿದೆ.
2btl-Adike

2btl-adike-2
ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಇವರ ಅಡಿಕೆ ಗೋದಾಮಿನ ಬಳಿ ವಾಹನವೊಂದಕ್ಕೆ ಅಡಿಕೆ ಗೋಣಿ ತುಂಬಿಸುವ ಸದ್ದು ಪಕ್ಕದಲ್ಲೇ ಇರುವ ಕಟ್ಟಡ ಮಾಲೀಕರಿಗೆ ಕೇಳಿಸಿದೆ. ಅವರು ಎದ್ದು ಮನೆ ಕಿಟಕಿಯಿಂದಲೇ ಗದರಿಸಿದಾಗ ಕಳ್ಳರು ಒಂದು ಗೋಣಿ ಅಡಿಕೆಯನ್ನು ಅಂಗಡಿ ಎದುರಿನ ಅಂಗಳದಲ್ಲೇ ಬಿಟ್ಟು ವಾಹನದೊಂದಿಗೆ ಬಿ.ಸಿ.ರೋಡ್ನ ಕಡೆಗೆ ಪರಾರಿಯಾಗಿದ್ದಾರೆ. ಇದರಿಂದಾಗಿ ಗೋದಾಮಿನಲ್ಲಿ ತಲಾ 65 ಮತ್ತು 45 ಕಿಲೋ ಭಾರದ ಒಟ್ಟು 16 ಗೋಣಿ ಸುಲಿದ ಒಣ ಅಡಿಕೆ ಮತ್ತು ಸುಮಾರು 15ಸಾವಿರಕ್ಕೂ ಮಿಕ್ಕಿ ನಗದು ಕಳವಾಗಿದೆ ಎಂದು ಅಡಿಕೆ ವ್ಯಾಪಾರಿ ಯಾಸಿರ್ ನಗರ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಎಎಸ್ಪಿ ರಾಹುಲ್ ಕುಮಾರ್, ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್ ನೇತೃತ್ವದ ಪೊಲೀಸರು ಶ್ವಾನದಳ ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಮತ್ತೆ ಪ್ರೊಬೆಶನರಿ ಎಸೈ ಮಂಜುನಾಥ, ಎಎಸೈ ಸಂಜೀವ ಮತ್ತಿತರ ಪೊಲೀಸರು ಧಾವಿಸಿ ಇಲ್ಲಿನ ಪರಿಸರದಲ್ಲಿ ವಿವಿಧ ಅಂಗಡಿ ಮತ್ತಿತರ ಸಂಸ್ಥೆಗಳು ಅಳವಡಿಸಿರುವ ಸಿಸಿ ಕ್ಯಾಮೆರಾ ಮತ್ತಿತರ ದಾಖಲೆ ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ.
ಆರಂಭದಲ್ಲಿ ಶಟರ್ ಮೇಲೆತ್ತಲು ಬೀಗದ ಬದಿಗೆ ಕಬ್ಬಿಣದ ಸಲಾಖೆ ಉಪಯೋಗಿಸಿದ್ದು, ಬಳಿಕ ವಾಹನ ದುರಸ್ತಿ ವೇಳೆ ಉಪಯೋಗಿಸುವ ಜ್ಯಾಕ್ ಮೂಲಕ ಬೀಗವನ್ನು ಎತ್ತರಕ್ಕೆ ಬಾಗಿಸಿ ಶಟರ್ ಮೇಲೆತ್ತಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಇಲ್ಲಿಗೆ ಸಮೀಪದ ಬಡ್ಡಕಟ್ಟೆ ಎಂಬಲ್ಲಿ ಕಮಲಾಕ್ಷ ಶೆಣೈ ಎಂಬವರ ಅಂಗಡಿಯಿಂದಲೂ ಒಟ್ಟು 12 ಗೋಣಿ ಅಡಿಕೆ ಕಳವುವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕಳ್ಳರ ತಂಡವೂ ಚುರುಕಾಗುತ್ತಿದೆ. ಇದಕ್ಕಾಗಿ ಪ್ರತಿಯೊಂದು ಅಂಗಡಿಗೆ ಪ್ರತ್ಯೇಕ ಸಾಧ್ಯವಾಗದಿದ್ದಲ್ಲಿ ಪಕ್ಕದ ಐದಾರು ಅಂಗಡಿ ಮತ್ತಿತರ ಸಂಸ್ಥೆಗಳು ಒಟ್ಟಾಗಿ ಸೇರಿಕೊಂಡು ಭದ್ರತಾ ಸಿಬ್ಬಂದಿ ನೇಮಕ ಅಥವಾ ಅಂಗಡಿ ಎದುರು ಎತ್ತರದಲ್ಲಿ ಹೆಚ್ಚು ಪ್ರಖರತೆ ಹೊಂದಿರುವ ವಿದ್ಯುತ್ ದೀಪ ಮತ್ತು ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

-ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ

By suddi9

Leave a Reply

Your email address will not be published. Required fields are marked *