ಬಂಟ್ವಾಳ: ಸೌತ್ ಕೆನರಾ ಛಾಯಾಚಿತ್ರಗಾರರ ಸಂಘ ದ.ಕ-ಉಡುಪಿ ಇದರ ರಜತ ಮಹೋತ್ಸವದ ಪ್ರಯುಕ್ತ ಸಂಘದ ಬಂಟ್ವಾಳ ಘಟಕದ ಆಶ್ರಯದಲ್ಲಿ ಹಲಸಿನೊಂದಿಗೆ ಒಂದು ದಿನ ಎಂಬ ವಿಶಿಷ್ಟ, ವಿನೂತನ ಕಾರ್ಯಕ್ರಮವು ಜೂ- 14 ರವಿವಾರ ಬಿ.ಸಿ.ರೋಡಿನ ಶ್ರೀನಿವಾಸ ರೆಸಿಡೆನ್ಸಿಯಲ್ಲಿ ಆಯೋಜಿಸಲಾಗಿದೆಎಂದು ಅಧ್ಯಕ್ಷ ಎನ್.ಆನಂದ ತಿಳಿಸಿದ್ದಾರೆ. ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ಲಕ್ಷಿತ ಕಲ್ಪವೃಕ್ಷವಾದ ಹಲಸಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಸ್ನೇಹಿ ಸಮಾಜಮುಖಿ ಈ ಕಾರ್ಯಕ್ರಮವು ನಡೆಯಲಿದೆ ಎಂದರು.


ಸಂಘದ ಬಂಟ್ವಾಳ ಘಟಕವು ಹಲವಾರು ವರ್ಷಗಳಿಂದ ರಕ್ತದಾನ ಶಿಬಿರ, ಪುಸ್ತಕ ವಿತರಣೆ, ಉಚಿತ ಆರೋಗ್ಯ ಶಿಬಿರ ಮುಂತಾದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ತಿಳಿಸಿದ ಅವರು ಹಲಸಿಗೆ ಸ್ಥಳೀಯವಾಗಿ ಒಂದು ಮಾರುಕಟ್ಟೆ ಸೃಷ್ಟಿಯಾಗುವ ಆಶಯದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಂಪ್ರದಾಯಿಕವಾಗಿ, ಪಾರಂಪರಿಕ ವಿವಿಧ ಪಾಕ ವೈವಿಧ್ಯ ಹಾಗೂ ಇಂದಿನ ಮಾರುಕಟ್ಟೆಗೆ ಜನಮೆಚ್ಚುಗೆ ಪಡೆಯಬಹುದಾದಂತಹ ತಿಂಡಿಗಳನ್ನು ಸವಿಯೂಟದ ಮೂಲಕ ಬಡಿಸಿ ಜಾಗೃತಿ ಮೂಡಿಸುವ ಸದುದ್ದೇಶವನ್ನು ಹೊಂದಲಾಗಿದೆ.
ಹಲಸು ತಿನ್ನುವ ಸ್ಪರ್ಧೆ :- ಪರಿಸರ ಖಾತೆಯ ಸಚಿವರಾದ ರಮಾನಾಥ ರೈಯವರು ಉದ್ಘಾಟನೆ ಮಾಡಲಿದ್ದು, ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಮುಕ್ತ ಹಲಸು ಛಾಯಾಚಿತ್ರ ಸ್ಪರ್ಧೆ , ಮಹಿಳೆಯರಿಗಾಗಿ ಹಲಸಿನ ಖಾದ್ಯಗಳ ಅಡುಗೆ ಸ್ಪರ್ಧೆ , ಮುಳಿಯ ವೆಂಕಟಕೃಷ್ಣ ಶರ್ಮರ ನೇತೃತ್ವದ ಹಲಸು ಸ್ನೇಹಿ ಕೂಟದವರಿಂದ ವಿವಿಧ ಹಲಸಿನ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹಲಸು ತಿನ್ನುವ ಸ್ಪರ್ಧೆ ಯನ್ನು ಆಯೋಜಿಸಿಲಾಗಿದೆ ಎಂದು ವಿವರಿಸಿದರು. ಅಡಿಕೆ ಪತ್ರಿಕೆಯ ಶ್ರೀ ಪಡ್ರೆಯವರಿಂದ ಹಲಸಿನ ಮೌಲ್ಯವರ್ಧನೆ- ವಿಶ್ವದರ್ಶನ ಪವರ್ ಪೊಂಟ್ ಉಪನ್ಯಾಸ ನೀಡಲಿದ್ದಾರೆ. ಎಳೆ ಹಲಸಿನ ಉಪ್ಪಿನಕಾಯಿ, ಟೆಂಡರ್ ಜಾಕ್ ಕಬಾಬ್, ಫ್ರೈ, ರವಾ ಫ್ರೈ, ಎಳೆ ಹಲಸಿನ ಬಿರಿಯಾನಿ, ಉಪ್ಪು ಸೋಳೆ ಸುಕ್ಕ, ಹಲಸಿನ ಹಲ್ವ, ಹಲಸಿನ ಹಪ್ಪಳ, ಹಲಸಿನ ಶೀರಾ, ಹಲಸಿನ ಪಾಯಸ, ಗುಜ್ಜೆ ಗಸಿ, ಹಲಸಿನ ಪಲ್ಯ, ಹಲಸಿನ ಬೀಜದ ಸಾರು, ಮಾಂಬಳದ ಗೊಜ್ಜು. ಹಲಸಿನ ಐಸ್ ಕ್ರೀಂ, ಹಲಸಿನ ಗಟ್ಟಿ, ಗಾರಿಗೆ,ಎಳೆ ಹಲಸಿನ ಪೆಪ್ಪರ್, ಮಂಚೂರಿಯನ್, ಬೀಜದ ಪಲ್ಯ ಮುಂತಾದ 25 ಕ್ಕೂ ಮಿಕ್ಕಿದ ಹಲಸಿನ ವೈವಿಧ್ಯಮಯ ಸವಿಯೂಟವನ್ನು ಕೇವಲ ರೂ 199/- ಪಾವತಿಸಿ ಸವಿಯಬಹುದು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜೇಂದ್ರ ಕೆ., ದಯಾನಂದ.ಬಿ, ಹರೀಶ್ ರಾವ್, ಸುಕುಮಾರ್, ರವಿ ಕಲ್ಪನೆ ಮೊದಲಾದವರಿದ್ದರು
