ಬಂಟ್ವಾಳ : ತಾಲೂಕಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮುಂಗಾರು ಚುರುಕುಗೊಂಡಿದ್ದು, ಬಿ ಸಿ ರೋಡು ಫ್ಲೈ ಓವರ್ನ ಅವೈಜಾನಿಕ ಕಾಮಗಾರಿಯ ಪರಿಣಾಮ ಅನಾವರಣಗೊಳ್ಳುತ್ತಿದೆ. ಮೇಲ್ಸೇತುವೆ ಮೇಲಿನಿಂದ ಘನ ವಾಹನಗಳು ಸಂಚರಿಸುವ ವೇಳೆ ಸೇತುವೆಯಲ್ಲಿ ಸಂಗ್ರಹವಾಗಿರುವ ಮಳೆ ನೀರು ಭಾರೀ ಪ್ರಮಾಣದಲ್ಲಿ ಕೆಳ ಭಾಗಕ್ಕೆ ಚಿಮ್ಮುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇದು ಕಳೆದ ಕೆಲವು ವರ್ಷಗಳ ಸಮಸ್ಯೆಯಾಗಿದ್ದು, ಪ್ರತಿವರ್ಷವೂ ಈ ಬಗ್ಗೆ ಮಾಧ್ಯಮಗಳು ಸಚಿತ್ರವಾಗಿ ವರದಿ ಪ್ರಕಟಿಸಿ ಗಮನ ಸೆಳೆದಿದೆಯಾದರೂ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ಗಳು ಅಥವಾ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನಲೆಯಲ್ಲಿ ಸಮಸ್ಯೆ ಈ ಬಾರಿಯೂ ಮುಂದುವರಿದಿದೆ.
ಮೇಲ್ಸೇತುವೆಯಿಂದ ನೀರು ಭಾರೀ ಪ್ರಮಾಣದಲ್ಲಿ ಕೆಳಕ್ಕೆ ಚಿಮ್ಮುವ ಪರಿಣಾಮ ಕೆಳಭಾಗದ ಮುಖ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ತೀವ್ರ ಅಪಾಯಕರ ಸನ್ನಿವೇಶವನ್ನು ಎದುರಿಸುತ್ತಿದ್ದಾರೆ. ಮೇಲಿನಿಂದ ಒಂದೇ ಸವನೆ ತಕ್ಷಣ ಚಿಮ್ಮಿ ಬರುವ ನೀರಿನ ಬಗ್ಗೆ ಯಾವುದೇ ಪೂರ್ವ ಸೂಚನೆ ಇಲ್ಲದೆ ಇರುವುದರಿಂದ ವಾಹನ ಸವಾರರು ಏಕಾಏಕಿ ಬದಿಗೆ ಸರಿಸುವುದೋ, ಬ್ರೇಕ್ ಹಾಕುವುದೋ ಮಾಡುವ ಮೂಲಕ ಭಾರೀ ದುರಂತದ ಅಪಾಯಕರ ಸನ್ನಿವೇಶ ಸಂಭವಿಸುವ ಸಾಧ್ಯತೆ ಕಂಡು ಬರುತ್ತಿದೆ.
ಅಲ್ಲದೆ ಮೇಲಿನಿಂದ ಚಿಮ್ಮುವ ನೀರಿನಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಂಪೂರ್ಣವಾಗಿ ಒದ್ದೆಯಾಗಿ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡು ನೇರವಾಗಿ ಮನೆ ಕಡೆ ಹೆಜ್ಜೆ ಹಾಕುತ್ತಿರುವ ಸನ್ನಿವೇಶಗಳೂ ಕಂಡು ಬಂದಿದೆ.
ಇಲ್ಲಿನ ಚರಂಡಿ ನಿಮಣಕ್ಕೆ ಹಾಗೂ ತ್ಯಾಜ್ಯ ವಿಲೇವಾರಿಗೆ ಪುರಸಭಾಡಳಿತ ಸೂಕ್ತ ವ್ಯವಸ್ಥೆ ಮಾಡದೆ ಇರುವ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುತ್ತಿದೆ. ಎಲ್ಲೆಂದರಲ್ಲಿ ವಿಲೇವಾರಿಯಾಗದೆ ರಾಶಿ ಬಿದ್ದಿರುವ ಕೊಳಚೆ ತ್ಯಾಜ್ಯಗಳು ಮಳೆನೀರಿನಲ್ಲಿ ಕೊಚ್ಚಿಕೊಂಡು ಬಂದು ಇಡೀ ಪರಿಸರವನ್ನು ದುರ್ನಾ ತಮಯವನ್ನಾಗಿಸುವ ಚಿತ್ರಣಗಳೂ ಕಂಡು ಬಂದಿದೆ.
