ಬಂಟ್ವಾಳ; ಯಲ್ಲಾಲಿಂಗ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸುಮಾರು 1 ಸಾವಿರ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕದಲ್ಲಿ ರಸ್ತೆ ತಡೆ ನಡೆಸಿ ಶನಿವಾರ ಪ್ರತಿಭಟನೆ ನಡೆಸಿದರು.
ಕಲ್ಲಡ್ಕ ದ ಮೇಲಿನ ಪೇಟೆಯಲ್ಲಿ ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು ಕೆಲ ಕಾಲ ರಸ್ತೆ ತಡೆ ನಡೆಸಿ, ಪ್ರ ತಿಭಟನಾ ಸಭೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಎಬಿವಿಪಿ ಯ ಪ್ರಾಂತ ವಿದ್ಯಾರ್ಥಿನಿ ಸಹಪ್ರಮುಖ್ ಕು.ಅಕ್ಷತಾ ಕೆ.ಎಂ ಮಾತನಾಡಿ, ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ ಕಾರಣಕ್ಕೆ ಅಮಾನುಷವಾಗಿ ಕೊಲೆ ನಡೆಸಲಾಗಿದೆ, ಇದರ ಹಿಂದೆ ರಾಜ್ಯ ಸರ್ಕಾರದ ಸಚಿವರೊಬ್ಬರ ಕೈವಾಡವಿದೆ ಎಂದು ಆರೋಪಿಸಿದರು. ಕಳೆದ ಒಂದು ವರ್ಷದಲ್ಲಿ 5-6 ವಿದ್ಯಾರ್ಥಿಗಳ ಹತ್ಯೆ ನಡೆದಿದ್ದರೂ, ಸರ್ಕಾರದ ಹಂತದಲ್ಲಿ ಇದರ ಸಮರ್ಪಕ ತನಿಖೆ ಆಗುತ್ತಿಲ್ಲ ಎಂದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕೊಲೆಗಡುಕ ಸರ್ಕಾರ ಎಂದು ಟೀಕಿಸಿದರು. ಯಲ್ಲಾಲಿಂಗ ಕೊಲೆ ಪ್ರಕರಣದ ಹೊಣೆ ಹೊತ್ತು ಸಚಿವ ತಂಗಡಗಿಯವರು ತಕ್ಷಣ ರಾಜೀನಾಮೆ ನೀಡುವಂತೆ ಅವರು ಆಗ್ರಹಿಸಿದರು.
ಕು.ನಂದಿತಾ, ರತ್ನಾ ಅಕ್ಷತಾ ದೇವಾಡಿಗರ ಕೊಲೆಪ್ರಕರಣದಲ್ಲಿ ಸರ್ಕಾರ ನೈಜ ಆರೋಪಿಗಳನ್ನು ಬಂಧಿಸದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದೆ, ಬೆಂಗಳೂರಿನ ಗೌತಮಿ ಶೂಟೌಟ್ ಪ್ರಕರಣ ಹಾಗೂ ಧರ್ಮಸ್ಥಳದ ಕು.ಸೌಜನ್ಯ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ವಿದ್ಯಾರ್ಥಿ ರಾಘವ್ ಪ್ರತಿಭಟನಾ ಸಭೆಯನ್ನುದ್ದೇಶಿ ಮಾತನಾಡಿದರು. ಬಳಿಕ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ವೃತ್ತನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ ನೇತೃತ್ವದಲ್ಲಿ ಠಾಣಾಧಿಕಾರಿಗಳಾದ ನಂದಕುಮಾರ್, ರಕ್ಷಿತ್ ಗೌಡ, ಚಂದ್ರಶೇಖರಯ್ಯ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು.
