‘ತುಳು ಸಂಸ್ಕೃತಿ ಸಂರಕ್ಷಣೆ ಮತ್ತು ವಸ್ತು ಸಂಗ್ರಹಾಲಯದ ಮಹತ್ವ’ -ಪ್ರೊ.ತುಕಾರಾಮ ಪೂಜಾರಿ
ಆಧುನಿಕ ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ಬದಲಾಗುವ ಕಾಲಕ್ಕೆ ಅನುಗುಣವಾಗಿ ಬದುಕುವ ರೀತಿ, ಆಚಾರ-ವಿಚಾರಗಳೂ ಪಲ್ಲಟಕ್ಕೆ ಒಳಗಾಗುತ್ತಿದೆ. ಆಧುನಿಕತೆಯಿಂದಾಗಿ ಕೃಷಿ ಪ್ರಧಾನವಾದ ಸಂಸ್ಕೃತಿಯನ್ನು ಹೊಂದಿದ್ದ ತುಳು ಸಂಸ್ಕೃತಿಯೂ ಸಹ ರೂಪಾಂತರಕ್ಕೆ ಒಳಗಾಗಿದೆ. ತುಳುವರ ಆಚಾರ-ವಿಚಾರ, ನಂಬಿಕೆ, ಭಾಷೆ ಮೊದಲಾದವುಗಳು ಮಣ್ಣಿನ ಸತ್ತ್ವವನ್ನು ಮೈಗೂಡಿಸಿಕೊಂಡಿರುವಂತದ್ದು. ಜನಪದರ ಬದುಕಿನ ರೀತಿ, ಆಚರಣೆ, ತಿಂಡಿ ತಿನಿಸುಗಳಲ್ಲೇ ತುಳು ಸಂಸ್ಕೃತಿ ಮೈವೆತ್ತಿದೆ.

PHOTO 2

ಕೃಷಿ ಕೇಂದ್ರಿತ ಬದುಕು ಅಳಿವಿನಂಚಿಗೆ ಸರಿದಾಗ ಅದೆಷ್ಟೊ ಕೃಷಿ ಸಂಬಂಧಿ ವಸ್ತುಗಳು ಕಣ್ಮರೆಯಾಗುವ ಅಪಾಯದಲ್ಲಿದೆ. ಒಂದು ಭಾಷೆ ಕಣ್ಮರೆಯಾಗುವುದೆಂದರೆ ಆ ಸಂಸ್ಕೃತಿಯ ಶಿಥಿಲತೆಯನ್ನು ತೋರಿಸುತ್ತದೆ. ತುಳು ಭಾಷೆ ತನ್ನದೇ ಆದ ಅನನ್ಯತೆಯನ್ನು ಹೊಂದಿದೆ. ಅನಕ್ಷರಸ್ಥರಾದ ಜನಪದರಿಂದ ನಿರ್ಮಾಣವಾದ ಪಾಡ್ಡನ, ಗಾದೆ, ಒಗಟು, ಕಬಿತೆಗಳು ಯಾವುದೇ ಪ್ರತಿಷ್ಠಿತ ಸಾಹಿತ್ಯ ಕೃತಿಗಳಿಗೆ ಕಡಿಮೆಯಿಲ್ಲ. ಸುತ್ತಣ ಪರಿಸರದ ಸಮೃದ್ಧವಾದ ಜೀವ ವೈವಿಧ್ಯ, ವಿವಿಧ ಧಾನ್ಯದ ತಳಿಗಳು, ಕೃಷಿಯ ಕುರಿತಾದ ಜನಪದರ ಜ್ಞಾನ ಅಗಾಧವಾದುದು. ಇದರ ಮಹತ್ವವನ್ನು ಯುವಪೀಳಿಗೆಗೆ ತಿಳಿಸುವ ಮತ್ತು ರಕ್ಷಿಸುವ ಕೆಲಸವು ಅಗತ್ಯವಾಗಿ ನಡೆಯಬೇಕು ಎಂದು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ಕನ್ನಡ ಸಂಘ ಆಯೋಜಿಸಿದ್ದ ‘ತುಳು ಸಂಸ್ಕೃತಿ ರಕ್ಷಣೆ ಮತ್ತು ವಸ್ತು ಸಂಗ್ರಹಾಲಯದ ಮಹತ್ವ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೇ ಸಂಸ್ಕೃತಿಯ ಹಿರಿಮೆಯು ಐತಿಹಾಸಿಕ ವಸ್ತುಗಳನ್ನು ಸಂರಕ್ಷಿಸುವುದರಲ್ಲಿದೆ. ಹಿರಿಯರು ಬಳಸಿದ ದಿನ ಬಳಕೆಯ ವಸ್ತುಗಳ ಮೌಲ್ಯ ನಮಗೆ ತಿಳಿದಿಲ್ಲ. ನಮಗೆ ಪಾಶ್ಚಾತ್ಯ ವಿದ್ವಾಂಸರು ಚರಿತ್ರೆ ರಕ್ಷಣೆಯ ಅರಿವನ್ನು ಮೂಡಿಸಿದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ಕೆಲಸ ವಸ್ತು ಸಂಗ್ರಹಾಲಯಗಳ ಮೂಲಕ ನಡೆಯುತ್ತಿದೆ. ಇವರ ಕೆಲಸ ನಮಗೆ ಮಾದರಿಯಾಗಬೇಕು. ಜನಪದರು ಬಳಕೆ ಮಾಡಿರುವ ವಸ್ತುಗಳು ಚರಿತ್ರೆಯನ್ನು ಕಟ್ಟುವ, ಪುನರ್ರಚನೆ ಮಾಡುವ ಅದ್ಭುತ ಕಾರ್ಯವನ್ನು ನಿರ್ವಹಿಸುತ್ತವೆ. ವಸ್ತು ಸಂಗ್ರಹಾಲಯವು ಒಂದು ಸಂಸ್ಕೃತಿಯ ಜೀವಂತಿಕೆಯನ್ನು ತಿಳಿಸಿಕೊಡುತ್ತದೆ ಎಂದರು.
ತುಳುವರು ಬಳಕೆ ಮಾಡುತ್ತಿದ್ದ ಬೇರೆ ಬೇರೆ ವಸ್ತು ಪರಿಕರಗಳು ಇಂದು ಸಂಶೋಧನೆಗೆ ಆಕರಗಳಾಗುತ್ತಿವೆ. ಜನಪದರ ಕಲ್ಪನೆ, ನಂಬಿಕೆ, ಆವಿಷ್ಕಾರ, ವೈಜ್ಞಾನಿಕತೆಗಳು ತುಳು ಜನಪದ ಅಧ್ಯಯನಕ್ಕೊಂದು ಮಾರ್ಗ ಸೂಚಿಯಾಗುತ್ತದೆ ಮಾತ್ರವಲ್ಲ ಅನ್ಯ ಸಂಸ್ಕೃತಿಯ ಜೊತೆಗೆ ತುಳು ಸಂಸ್ಕೃತಿಯನ್ನು ತುಲನಾತ್ಮಕವಾಗಿ ಅಧ್ಯಯನ ನಡೆಸುವುದಕ್ಕೂ ಸಹ ಉಪಯುಕ್ತವಾದುದು. ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ ನಮ್ಮ ಹಿರಿಯರು ಬಳಸಿದ ವಸ್ತುಗಳನ್ನು ಉಪೇಕ್ಷೆ ಮಾಡದೆ ಜತನದಿಂದ ರಕ್ಷಿಸುವುದನ್ನು ಕಲಿಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಂಘದ ಸಂಯೋಜಕ ಚೇತನ್ ಮುಂಡಾಜೆ ಸಂಘದ ಕಾರ್ಯಕ್ರಮದ ರೂಪುರೇಷೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಪ್ರಿಶಿತಾ ಮತ್ತು ರಕ್ಷಿತಾ ಪ್ರಾರ್ಥಿಸಿದರು. ವಿದ್ಯಾರ್ಥಿ  ರಕ್ಷಿತ್ ಸ್ವಾಗತಿಸಿದರು. ಕನ್ನಡ ಸಂಘದ ಕಾರ್ಯದರ್ಶಿ  ಸೌಂದರ್ಯ  ವಂದಿಸಿದರು. ವಿದ್ಯಾರ್ಥಿನಿ ರಶ್ಮಿತ ಕಾರ್ಯಕ್ರಮ ನಿರ್ವಹಿಸಿದರು

By suddi9

Leave a Reply

Your email address will not be published. Required fields are marked *