ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕೊಡ್ಯಮಲೆ ಅರಣ್ಯದ ಮಧ್ಯೆ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ತೆಯಾದ ನವಜಾತ ಶಿಶುವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪರಿಚಿತ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಾಗ ಅರಣ್ಯದ ಕಡೆಯಿಂದ ಮಗು ಕೂಗುವ ಧನಿ ಕೇಳಿಸಿದ್ದು ಸ್ಥಳಕ್ಕೆ ಹೋಗಿ ನೋಡಿದಾಗ ನವಜಾತ ಶಿಶು ಇರುವುದು ಬೆಳಕಿಗೆ ಬಂದಿದೆ. ಅವರು ಅದನ್ನು ತಕ್ಷಣ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ದು ನಡೆದ ಘಟನೆಯನ್ನು ವಿವರಿಸಿದ್ದಲ್ಲದೆ ತಾನು ಮಗುವನ್ನು ನೀಡಿರುವ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಸೂಚಿಸಿದ್ದರು ಎನ್ನಲಾಗಿದೆ.
ಅದರಂತೆ ಮಗುವನ್ನು ವಶಕ್ಕೆ ಪಡೆದಿಕೊಂಡಿರುವ ಆಸ್ಪತ್ರೆ ಸಿಬ್ಬಂದಿಗಳು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಿದ್ದಾರೆ. ಇದೀಗ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.