ಬಂಟ್ವಾಳ: ಕೇಂದ್ರ ಸರ್ಕಾರವು ಕೈಗೊಂಡಿರುವ ವಿವಿಧ ಜನಪರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಲುಪಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಮಂಚಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಬಾನುವಾರ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಜನಸ್ನೇಹಿಗೆ ಬದಲಾಗಿ ರೈತದ್ರೋಹಿ ಸರ್ಕಾರ ಆಡಳಿತದಲ್ಲಿದೆ. ದಿನಕ್ಕೊಬ್ಬರಂತೆ ರೈತರು ಕಷ್ಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ತೆಪ್ಪಗೆ ನಿದ್ರಿಸುತ್ತಿದೆ ಎಂದು ಟೀಕಿಸಿದರು.
ಬಿ.ಜೆ.ಪಿ. ಯುವ ಮೊರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಂಸದರನ್ನು ಹಿರಿಯ ಕಾರ್ಯಕರ್ತ ತಿಮ್ಮಯ್ಯ ಸಪಲ್ಯ ಸನ್ಮಾನಿಸಿದರು. ಕಾಂಗ್ರೆಸ್ ಕಾರ್ಯಕರ್ತ ಮೋಹನ ಪುಚ್ಚೆಕೆರೆ ಬಿಜೆಪಿಗೆ ಸೇರ್ಪಡೆಗೊಂಡರು. ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಿ.ಜೆ.ಪಿ. ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಬಿ.ಜೆ.ಪಿ. ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು, ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನೇಮಿರಾಜ್ ರೈ, ಗ್ರಾ.ಪಂ.ಅಧ್ಯಕ್ಷೆ ಪ್ರಮಿಳಾ, ಉಪಾಧ್ಯಕ್ಷ ಮೋಹನ್ದಾಸ್ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಕುಂಟೂರು, ಕ್ಷೇತ್ರ ಸಮಿತಿ ಸದಸ್ಯ ಗಣೇಶ್ ಐತಾಳ್ ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಕಾರ್ಯದರ್ಶಿ ರಮೇಶ್ ರಾವ್ ಪತ್ತುಮುಡಿ ಸ್ವಾಗತಿಸಿ, ಕೇಶವ ರಾವ್ ನೂಜಿಪ್ಪಾಡಿ ವಂದಿಸಿದರು. ಸಂತೋಷ್ ನಾಯಕ್ ಗುಂಡಿಮಜಲು ಕಾರ್ಯಕ್ರಮ ನಿರೂಪಿಸಿದರು.