ಬಂಟ್ವಾಳ: ತುಳುನಾಡಿನಲ್ಲಿ ಆಷಾಢ ಮಾಸದ ಅಧಿಕ ಮಳೆಗೆ ಕೃಷಿ ಚಟುವಟಿಕೆಯಿಲ್ಲದೆ ವಿಶ್ರಾಂತಿ ಪಡೆಯುತ್ತಿರುವ ರೈತರು ಗುಣಮಟ್ಟ ಮತ್ತು ಆರೋಗ್ಯಪೂರ್ಣ ಆಹಾರವಾಗಿ ಗೆಡ್ಡೆ ಗೆಣಸು ಮತ್ತು ಸೊಪ್ಪು ತರಕಾರಿ ಮಾತ್ರವಲ್ಲದೆ ಬಡಜನರ ಕಲ್ಪವೃಕ್ಷದಂತಿರುವ ಹಲಸಿನಿಂದ ವಿವಿಧ ಖಾದ್ಯಗಳನ್ನು ಸೇವಿಸುತ್ತಿದ್ದ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸಲು ಆಟಿಡೊಂಜಿ ಕೂಟ ಅಗತ್ಯವಿದೆ ಎಂದು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಹೇಳಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಗಾಣಿಗರ ಸೇವಾ ಸಂಘದ ನರಿಕೊಂಬು ಗ್ರಾಮ ಸಮಿತಿ ವತಿಯಿಂದ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ‘ಆಟಿಡೊಂಜಿ ಕೂಟ’ ಮತ್ತು ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಹಲಸಿನ ಹಣ್ಣು ತುಂಡರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನರಿಕೊಂಬು ಗ್ರಾಮ ಸಮಿತಿ ಅಧ್ಯಕ್ಷ ಬಿ.ದಿನೇಶ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಮತ್ತು ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ, ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ‘ಅದ್ದೂರಿ ಆಟಿದ ಕೂಟ’ ಕಾರ್ಯಕ್ರಮಗಳಿಂದ ಆಷಾಢ ಮಾಸವು ಸಂಪದ್ಭರಿತವಾಗಿತ್ತು ಎಂಬ ಸಂದೇಶ ಮಕ್ಕಳಲ್ಲಿ ಮೂಡಿಸುತ್ತಿದೆ ಎಂದರು.
ಇದೇ ವೇಳೆ ಸ್ವಜಾತಿ ಗ್ರಾ.ಪಂ.ಸದಸ್ಯರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
ಕಾರಿಂಜೇಶ್ವರ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ವೇದವ ಗಾಣಿಗ, ಬಂಟ್ವಾಳ ಗಾಣಿಗ ಸಂಘದ ಕೋಶಾಧಿಕಾರಿ ಈಶ್ವರ ಮೆಲ್ಕಾರ್, ಜಿಲ್ಲಾ ಗಾಣಿಗ ಸಂಘದ ಕಾರ್ಯದರ್ಶಿ ತಾರನಾಥ ಸುವರ್ಣ, ಕೋಶಾಧಿಕಾರಿ ಕೇಶವ ಮಳಲಿ, ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಉಪಾಧ್ಯಕ್ಷ ವಿಶ್ವನಾಥ ಎಸ್.ಎ., ಮಾಜಿ ನಿರ್ದೇಶಕರಾದ ಮೋಹನ್ ಕೆ.ಶ್ರೀಯಾನ್ ರಾಯಿ, ತಿಮ್ಮಪ್ಪ ಸಪಲ್ಯ ಇಡ್ಕಿದು, ಸತ್ಯಶ್ರೀ ಸೇವಾ ಟ್ರಸ್ಟಿನ ಅಧ್ಯಕ್ಷ ನಿತ್ಯಾನಂದ ಪುತ್ರೋಟಿಬೈಲು ಮತ್ತಿತರರು ಶುಭ ಹಾರೈಸಿದರು.
ಗ್ರಾಮ ಸಮಿತಿ ಗೌರವಾಧ್ಯಕ್ಷ ನರ್ಸಪ್ಪ ಅಮೀನ್, ಪದಾಧಿಕಾರಿಗಳಾದ ಬಾಲಕೃಷ್ಣ ಮಾಸ್ತರ್, ಪುರುಷೋತ್ತಮ ಎಸ್., ಯೋಗೀಶ ಸಪಲ್ಯ ಪೊಯಿತಾಜೆ, ಸಂಜೀವ ಸಪಲ್ಯ ಕೇದಗೆ, ನವನೀತ ಪುತ್ರೋಟಿಬೈಲು, ಪ್ರಕಾಶ ಶ್ರೀಯಾನ್ ಪುತ್ರೋಟಿಬೈಲು, ಪದ್ಮನಾಭ ಕರ್ಬೆಟ್ಟು ಮತ್ತಿತರರು ಇದ್ದರು.
ಗ್ರಾಮ ಸಮಿತಿ ಗೌರವಾಧ್ಯಕ್ಷ ಕೃಷ್ಣಪ್ಪ ಗಾಣಿಗ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ತಾಳಿಪಡ್ಪು ವಂದಿಸಿದರು. ನಾಗೇಶ ಪಾಣೆಮಂಗಳೂರು ಮತ್ತು ಶಿಕ್ಷಕಿ ವಿಜಯ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.
