ಮೂಡುಬಿದಿರೆ: ಅಕ್ರಮ ಗೋಸಾಗಾಟ, ಗೋಹತ್ಯೆ, ಕಸಾಯಿಖಾನೆಯ ಕಾರ್ಯಚರಣೆ ಮೂಡುಬಿದಿರೆಯಲ್ಲಿ ಹೆಚ್ಚುತ್ತಿದ್ದು ಅಶಾಂತಿ ಹಬ್ಬಿಸಲು ಕಾರಣವಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಹೆಸರಾಗಿರುವ ಮೂಡುಬಿದಿರೆಯಲ್ಲಿ ಕೋಮು ಸಂಘರ್ಷಕ್ಕೆ ಆಸ್ಪದ ನೀಡುವಂತೆ ಗಂಟಾಲ್ಕಟ್ಟೆಯ ಜಾನುವಾರು ಪ್ರಕರಣ ನಡೆದಿದ್ದು ಈ ಕೃತ್ಯಗಳನ್ನು ಖಂಡಿಸಿ ಅ24ರ ಬೆಳಿಗ್ಗೆ 10ಕ್ಕೆ ಮೂಡುಬಿದಿರೆಯಲ್ಲಿ ಬೃಹತ್ ಗೋ ಜನಜಾಗೃತಿ ಸಮಾವೇಶ ನಡೆಯಲಿದೆ ಎಂದು ಬಜರಂಗದಳ ಪ್ರಖಂಡ ಸಂಚಾಲಕ ಸೋಮನಾಥ ಕೋಟ್ಯಾನ್ ಹೇಳಿದ್ದಾರೆ.

ಶನಿವಾರ ಮೂಡುಬಿದಿರೆ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೋಮವಾರ ಬೆಳಿಗ್ಗೆ 10ರಿಂದ ಸಾವಿರ ಕಂಬದ ಬಸದಿಯ ಆವರಣದಿಂದ ಹೆದ್ದಾರಿಯಲ್ಲಿ ರಾಜೀವ ಗಾಂಧಿ ವಾಣಿಜ್ಯ ಸಂಕೀರ್ಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಭಾಗವಹಿಸಲಿದ್ದಾರೆ.
ಎಂದವರು ತಿಳಿಸಿದರು.
ಬೆಳುವಾಯಿ, ಗಂಟಾಲ್ಕಟ್ಟೆ, ತೋಡಾರು, ಹಂಡೇಲು ಪರಿಸರದಲ್ಲಿ ಅಕ್ರಮ ಗೋಸಾಗಾಟ, ಹತ್ಯೆಯ ಕೆಲಸ ನಿರಂತರ ನಡೆದಿದೆ. ಹಲವೆಡೆ ಹಟ್ಟಿಗೆ ನುಗ್ಗಿ ತಲವಾರು ತೋರಿಸಿ ದನಗಳ್ಳತನ ಮಾಡಿದ ಪ್ರಕರಣಗಳಿವೆ. ಕೃಷಿ ಮತ್ತು ಹೈನುಗಾರಿಕೆ ನಂಬಿಕೊಂಡಿದ್ದ ಜನರ ಜೀವನ ಕಷ್ಟದಲ್ಲಿದೆ. ರಸ್ತೆಬದಿ ಮಲಗಿರುವ ದನಗಳನ್ನೂ ರಾತ್ರಿ ಕದಿಯುವ ವ್ಯವಸ್ಥಿತ ಕುಕೃತ್ಯ ನಡೆಯುತ್ತಿದೆ. ಇಂತಹ ಸಮಾಜ ವಿದ್ರೋಹಿ ಕೃತ್ಯಗಳನ್ನು ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಮಟ್ಟ ಹಾಕುವ ಮೂಲಕ ಕೋಮು ಸೌಹಾರ್ದವನ್ನು ಕಾಪಾಡುವಂತೆ ಅವರು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಕೆ. ವಿಶ್ವನಾಥ ಪ್ರಭು, ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶಾಂತಾರಾಮ ಕುಡ್ವಾ ಉಪಸ್ಥಿತರಿದ್ದರು.