ಬಂಟ್ವಾಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಲೀನಾ ಬ್ರಿಟ್ಟೋ ಅವರನ್ನು ವಿಟ್ಲ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ವರ್ಷವಷ್ಟೇ ಗ್ರಾಮಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿರುವ ವಿಟ್ಲದಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಒಂದು ವರ್ಷ ಕಾಲ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಲೀನಾ ಬ್ರಿಟ್ಟೋ ಅವರು ಕಡಿಮೆ ಅವಧಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ನಡೆಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದ್ದರು. ಸಾರ್ವಜನಿಕ ಕುಂದು ಕೊರತೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನ ಮೆಚ್ಚುಗೆ ಪಡೆದ ಅಧಿಕಾರಿಯಾಗಿ ಗುರುತಿಸಿ ಕೊಂಡಿದ್ದರು.
ಎರಡನೇ ಹಂತದ ಸಮಗ್ರ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ, ನೆನೆಗುದಿಗೆ ಬಿದ್ದಿದ್ದ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಮರು ಜೀವ ನೀಡಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ, ಪುರಸಭೆಗೆ ಪಾವತಿಯಾಗದೇ ಉಳಿದಿದ್ದ 15 ಲಕ್ಷಕ್ಕಿಂತಲೂ ಅಧಿಕ ತೆರಿಗೆ ಹಣವನ್ನು ಲೋಕಾ ಅದಾಲತ್ ಮೂಲಕ ಪುರಸಭೆಯ ಬೊಕ್ಕಸಕ್ಕೆ ಜಮೆ ಗೊಳಿಸಿದ್ದು, ಮೊದಲ ಬಾರಿಗೆ ಪುರಸಭೆಯ ರೆಕಾರ್ಡ್ ರೂಂಗೆ ಟೆಂಡರ್, ಕೋರ್ಟ್ನಲ್ಲಿದ್ದ ಹಲವಾರು ವ್ಯಾಜ್ಯಗಳಿಂದ ಪುರಸಭೆಯನ್ನು ಮುಕ್ತಗೊಳಿಸಿದ್ದು, ಹಲವು ವರ್ಷಗಳಿಂದ ಬೆಳಕು ನೀಡದೆ ಕತ್ತಲಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬೀದಿ ದೀಪಗಳ ನಿರ್ವಹಣೆಯ ಜವಬ್ದಾರಿಯನ್ನು ಪುರಸಭೆ ವಹಿಸಿಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದ್ದ ಇವರು ಬಂಟ್ವಾಳದ ಸಮಗ್ರ ಅಭಿವೃದ್ದಿಗೆ ವಿಶೇಷ ಪ್ರಯತ್ನ ನಡೆಸಿದ್ದರು. ಜಕ್ರಿಬೆಟ್ಟುವಿನಲ್ಲಿ ಟ್ರೀಪಾರ್ಕ್ ನಿರ್ಮಾಣ, ಬಿ.ಸಿರೋಡಿನಲ್ಲಿ ಪ್ರಯಾಣಿಕರ ತಂಗುದಾಣ, ವಾಹನ ಪಾರ್ಕಿಂಗ್ ವ್ಯವಸ್ಥೆ, ಸಂತೆ ಮಾರುಕಟ್ಟೆ, ಬೈಪಾಸ್ ಬಳಿ ಮೀನು ಮಾರುಕಟ್ಟೆ ಹಾಗೂ ಯುವತಿಯರಿಗೆ ಟೈಲರಿಂಗ್ ಶಾಲೆ ತೆರಯಲು ಯೋಜನೆ ರೂಪಿಸಿ ಕಾರ್ಯೊ ನ್ಮುಖರಾಗಿರುವಾಗಲೇ ವರ್ಗಾವಣೆಗೊಂಡಿರುವುದು ಅಧಿಕಾರಿಗಳ ವಲಯದಲ್ಲಿ ನಿರಾಸೆಯ ಭಾವ ಮೂಡಿಸಿದೆ.
ಆಡಳಿತ ಪಕ್ಷದಿಂದಲೇ ವರ್ಗಾವಣೆ ತಂತ್ರ:
ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳಿಗೆ ದ.ಕ.ಜಿಲ್ಲೆಯಲ್ಲಿ ಅಭಿವೃದ್ದಿ ವಿರೊಧಿ ಜನಪ್ರತಿನಿಧಿಗಳ ಕಾಟ ತಪ್ಪಿದ್ದಲ್ಲ ಎನ್ನುವ ಮಾತಿಗೆ ಲೀನಾ ಬ್ರಿಟ್ಟೋ ಕೂಡ ಹೊರತಾಗಿಲ್ಲ. ಪುರಸಭೆಯ ಆಡಳಿತ ಪಕ್ಷದ ಕೆಲ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ಲೀನಾ ಬ್ರಿಟ್ಟೋ ಅವರನ್ನು ವರ್ಗಾ ಯಿಸಲು ಈ ಹಿಂದೆಯೇ ಹಲವು ಬಾರಿ ಪ್ರಯತ್ನಗಳು ನಡೆದಿದ್ದರೂ ಅದು ಫಲ ನೀಡಿರಲಿಲ್ಲ. ಕಾನೂನು ಬಾಹಿರ ಕೆಲಸಗಳಿಗೆ ಮನ್ನಣೆ ನೀಡದಿರುವುದು ಹಾಗೂ ಭ್ರಷ್ಟಾಚಾರ ರಹಿತವಾಗಿ ಕರ್ತವ್ಯ ನಿರ್ವಹಿಸಿದ್ದುದೇ ಅವರ ಎತ್ತಂಗಡಿಯ ಪ್ರಯತ್ನದ ಹಿಂದಿನ ಕಾರಣಗಳು ಎನ್ನಲಾಗುತ್ತಿದೆ.