ಬಂಟ್ವಾಳ : ಹೆಣ್ಣುಮಕ್ಕಳು ಯಾರನ್ನೂ ನಂಬಲಾರದ ಸಂಕೀರ್ಣ ಸ್ಥಿತಿಯಲ್ಲಿ ಸಂಕಟ ಅನುಭವಿಸುತ್ತಿದ್ದಾರೆ, ಮನೆಯಲ್ಲಿ, ಸಮಾಜದಲ್ಲಿ, ಕಾರ್ಯ ಕ್ಷೇತ್ರದಲ್ಲಿ ಮಹಿಳೆಯರು ಪ್ರತಿನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಖೇದಕರ ಸಂಗತಿ ಎಂದು ಬಂಟ್ವಾಳ ಜೆಎಂಎಫ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವಾನಂದ ಹೇಳಿದ್ದಾರೆ.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ , ವಕೀಲರ ಸಂಘ ಬಂಟ್ವಾಳ. ತಾಲೂಕು ಪಂಚಾಯತ್ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಕುಕ್ಕಿಪ್ಪಾಡಿ ಗ್ರಾಮಪಂಚಾಯತ್ ನ ಸಂಯುಕ್ತ ಆಶ್ರಯದಲ್ಲಿ ಕುಕ್ಕಿಪ್ಪಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ , ಸಂಚಾರಿ ನ್ಯಾಯಾಲಯದ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ದೌರ್ಜನ್ಯದ ವಿರುದ್ದ ವಾಗಿ ಜಾಗೃತಿ ಯಾಗಬೇಕು, ಪ್ರಜ್ಞಾವಂತ ಮಹಿಳೆಯರು ಸುಜ್ಞಾನಭರಿತ ಸಮಾಜಕಟ್ಟಬಲ್ಲರು ಎಂಬ ಕಾರಣಕ್ಕೆ ಕಾನೂನಿನ ಅರಿವು ಕಾರ್ಯಕ್ರಮವನ್ನು ಗ್ರಾಮಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದರು.
ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಮಾತನಾಡಿ, ಜನಸಾಮಾನ್ಯರು ಕಾನೂನಿನ ಅರಿವು ಮೂಡಿಸುವ ಕೆಲಸ ನ್ಯಾಯಾಂಗ ವ್ಯವಸ್ಥೆಯ ಮೂಲಕ ನಡೆಯುತ್ತಿರುವುದು ಸಂತಸದ ವಿಚಾರವಾಗಿದ್ದು, ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಯವಾದಿ ಆಶಾಪ್ರಸಾದ್ ರೈ ಯವರು ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಿ, ಇಡೀ ದೇಶದ ವ್ಯವಸ್ಥೆ ನಿಂತಿರುವುದು ಕುಟುಂಬ ವ್ಯವಸ್ಥೆಯ ಮೇಲೆ, ಭಾರತದಲ್ಲಿ ಇದಕ್ಕೆ ಹೆಚ್ಚು ಮೌಲ್ಯವಿದೆ. ಇದು ಉಳಿಯಬೇಕು, ಕೌಟುಂಬಿಕ ದೌರ್ಜನ್ಯ ಕಡಿಮೆಯಾಗಬೇಕು ಎನ್ನುವ ಕಾರಣಕ್ಕೆ ಕೌಟುಂಬಿಕ ದೌರ್ಜನ್ಯ ತಡೆಕಾಯ್ದೆ ಜಾರಿಯಾಗಿದೆ ಎಂದರು.ಕುಕ್ಕಿಪ್ಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ್ ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ರಮೇಶ್ ಉಪಾಧ್ಯಾಯ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ, ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ಉಪಾಧಕ್ಷೆ ವಿನಯ, ಅಭಿವೃದ್ದಿ ಅಧಿಕಾರಿ ತುಳಸಿ, ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಪುಂಚಮೆ, ಸರ್ಕಾರಿ ವಕೀಲರಾದ ಸತೀಶ್ ಕುಮಾರ್ ಶಿವಗಿರಿ, ಸಮಿತಿಯ ಮಧ್ಯಸ್ಥಿಕೆದಾರರಾದ ಬಿ.ಗಣೇಶ್ ಪೈ, ಯಶೋದ, ಶ್ರೀನಿವಾಸ್ ದೈಪಿಲ, ಸಮಿತಿ ಸಲಹೆಗಾರರಾದ ಕೇಶವಿಗಿರೀಶ್, ಸಿಬ್ಬಂದಿ ಬಾಲಕೃಷ್ಣ, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು. ನ್ಯಾಯವಾದಿ ಶಿವಪ್ರಕಾಶ ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ತುಳಸಿ ವಂದಿಸಿದರು