ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ನಿರ್ಜನ ಪ್ರದೇಶದಲ್ಲಿ ಇದೇ 26ರಂದು ಸಂಜೆ ಬಿ.ಸಿ.ರೋಡ್‍ನ ಕೈಕಂಬದಿಂದ ಎಂದಿನಂತೆ ಕೆಲಸ ಬಿಟ್ಟ ಬಳಿಕ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಬೆನ್ನಟ್ಟಿ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಕೇವಲ ಅಲ್ಪ ಸಂಖ್ಯಾತ ಎಂಬ ನೆಲೆಯಲ್ಲಿ ಪೊಲೀಸರ ಮೂಲಕ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದು ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ಆರೋಪಿಸಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಗುರುವಾರ ಸಂಜೆ ಸಂಘಟನೆ ಮುಖಂಡ ಗುರುರಾಜ್ ಬಂಟ್ವಾಳ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿ ಬಡಗಬೆಳ್ಳೂರು ಸಮೀಪದ ವರಕೋಡಿ ನಿವಾಸಿ ಸಂತೊಷ್ ಲೂಯಿಸ್ ಬರ್ನಾರ್ಡ್ (38) ಮೂರು ಮಕ್ಕಳ ತಂದೆಯಾಗಿದ್ದರೂ ಯುವತಿಯನ್ನು ಬೆನ್ನಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈತನು ಕೇವಲ ಅಲ್ಪಸಂಖ್ಯಾತ ಎಂಬ ಕಾರಣಕ್ಕಾಗಿ ಆತನ ವಿರುದ್ಧ ಸಡಿಲ ಕಾನೂನು ಸೆಕ್ಷನ್ ಹಾಕಲು ರಾಜಕೀಯ ಪಕ್ಷವೊಂದರ ನಾಯಕರು ಪೊಲೀಸರ ಮೇಲೆ ಒತ್ತಡ ಹೇರುತ್ತಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ಹಿಂದೂ ಸಮಾಜದ ಯುವತಿಗೆ ಸಾರ್ವಜನಿಕವಾಗಿ ಅನ್ಯಾಯ ಆಗಿದ್ದರೂ ಈ ಬಗ್ಗೆ ಮೌನವಾಗಿರುವ ರಾಜಕೀಯ ಪಕ್ಷವೊಂದು ಆರೋಪಿಗೆ ಮಾತ್ರ ರಕ್ಷಣೆಗೆ ಮುಂದಾಗಿದೆ ಎಂದು ದೂರಿದರು.
ಮಂಗಳೂರಿನಲ್ಲಿ ಹಿಂದೂ ಯುವತಿಯರಿಗೆ ಅನ್ಯ ಧರ್ಮೀಯರಿಂದ ಅನ್ಯಾಯ ಆಗುತ್ತಿದ್ದರೂ ನಾವು ರಕ್ಷಣೆಗೆ ಹೋದರೆ ನಮ್ಮ ಮೇಲೆ ‘ನೈತಿಕ ಪೊಲೀಸ್‍ಗಿರಿ’ ನೆಪದಲ್ಲಿ ಕಠಿಣ ಸೆಕ್ಷನ್ ದಾಖಲಿಸಿ ಬಳ್ಳಾರಿ ಜೈಲಿಗೆ ಹಾಕುತ್ತಿದ್ದಾರೆ. ಇದೀಗ ಇಲ್ಲಿನ ಆರೋಪಿ ಸಾರ್ವಜನಿಕವಾಗಿ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದರೂ ಪೊಲೀಸರು ಮಾತ್ರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಮಾತ್ರ ಆರೋಪಿ ಪರವಾಗಿ ಮತ್ತು ಆತನ ಯೋಗಕ್ಷೇಮದ ಬಗ್ಗೆ ಮಾತ್ರ ಬೊಬ್ಬಿಡುತ್ತಿದ್ದಾರೆ ಎಂದು ಟೀಕಿಸಿದರು. ಮುಖಂಡರಾದ ಶಶಿಕಿರಣ್, ಪ್ರದೀಪ್ ಅಜ್ಜಿಬೆಟ್ಟು, ಪ್ರಕಾಶ್ ಬೆಳ್ಳೂರು, ಕಿಶೋರ್ ಪಲ್ಲಿಪಾಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *