ಕಲ್ಯಾಣ್: ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮೋಹನೆ ಗಾಂವ್ಟಣ್ ವಾರ್ಡ್ ಕ್ರಮಾಂಕ 13ರಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕನ್ನಡಿಗ ದಯಾಶಂಕರ್ ಪಿ. ಶೆಟ್ಟಿ ಅವರು ಭರ್ಜರಿಯಾಗಿ ಜಯ ಗಳಿಸಿದ್ದಾರೆ. ದಯಾಶಂಕರ್ ಪಿ. ಶೆಟ್ಟಿ ಅವರು 1,551 ಮತಗಳನ್ನು ಗಳಿಸಿದ್ದು, ಪ್ರತಿ ಸ್ಪರ್ಧಿ  ಬಿಜೆಪಿ ಅಭ್ಯರ್ಥಿ  ಜನಾರ್ದನ ಪಾಟೀಲ್ ವಿರುದ್ಧ 462 ಮತಗಳಿಂದ ಜಯಗಳಿಸಿದ್ದಾರೆ.

dayashankar shetty
ಬಂಟ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾಗಿ, ಮಾಜಿ ನಗರ ಸೇವಕರಾಗಿ ಪರಿಸರದ ತುಳು-ಕನ್ನಡಿಗ ಹಾಗೂ ಇತರ ಭಾಷಿಗರೊಂದಿಗೆ ಉತ್ತಮ ಒಡನಾಟ ಹೊಂದಿರುವ ದಯಾಶಂಕರ್ ಪಿ. ಶೆಟ್ಟಿ ಅವರು ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಧುರೀಣರಾಗಿ, ಸಮಾಜ ಸೇವಕರಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.
2000-05ರಲ್ಲಿ ನಗರ ಸೇವಕಿಯಾಗಿ ಅದೇ ವಿಭಾಗದಿಂದ ಆಯ್ಕೆಗೊಂಡ ವೇದಾವತಿ ಶೆಟ್ಟಿ ಅವರ ಸಹೋದರರಾಗಿರುವ ಅವರು 2005-10ನೇ ಸಾಲಿನಲ್ಲಿ ಸ್ವತಃ ಕೋ-ಆಪ್ಟೆಡ್ ನಗರ ಸೇವಕರಾಗಿ ಆಯ್ಕೆಗೊಂಡಿದ್ದರು.
ಎಕ್ಕಾರು ನಡ್ಯೋಡಿಗುತ್ತು ದಯಾಶಂಕರ್ ಪಿ. ಶೆಟ್ಟಿ ಖ್ಯಾತ ಕೈಗಾರಿಕೋದ್ಯಮಿಯಾಗಿದ್ದು, ಈಗಾಗಲೇ ಸಮಾಜಪರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಪ್ರಸ್ತುತ ಎಕ್ಕಾರು ಶ್ರೀ ಮಹಾದೇವಿ ದೇವಸ್ಥಾನದ ಧರ್ಮದರ್ಶಿ  ಹಾಗೂ ಆಡಳಿತ ಮೊಕ್ತೇಸರರಾಗಿದ್ದು, ಕನ್ನಡಿಗರು ಹಾಗೂ ಕನ್ನಡೇತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಅವರು ಸ್ವಕ್ಷೇತ್ರದಲ್ಲಿ ಹಲವಾರು ಜನೋಪಯೋಗಿ ಕಾಮಗಾರಿಗಳನ್ನು ಮಾಡಿದ ಅಂಶಗಳು ಅವರ ಭರ್ಜರಿ ವಿಜಯಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

By suddi9

Leave a Reply

Your email address will not be published. Required fields are marked *