ಬಂಟ್ವಾಳ; ಇತ್ತೀಚೆಗಷ್ಟೇ ತನ್ನ ಏಕೈಕ ಪುತ್ರ ಪ್ರಶಾಂತ್ ಪೂಜಾರಿಯನ್ನು ಕಳೆದುಕೊಂಡ ಮೂಡಬಿದ್ರೆಯ ಆನಂದ ಪೂಜಾರಿ ಯಶೋಧ ದಂಪತಿಗಳು ಕಳೆದ ಗುರುವಾರ ಬಂಟ್ವಾಳ ಸಮೀಪದ ನಾವೂರು ಹಳೆಗೇಟು ವಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಹರೀಶ್ ಪೂಜಾರಿ ಯವರ ಕುಟುಂಬಕ್ಕೆ ಸಾಂತ್ವಾನ ಹೇಳುವುದರ ಜೊತೆಗೆ 1 ಲಕ್ಷ ರೂ ಪರಿಹಾರ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈಗಾಗಲೇ ತನ್ನ ಮಗನನ್ನು ಕಳೆದುಕೊಂಡಿರುವ ಆನಂದ ಪೂಜಾರಿ ದಂಪತಿ ಇದೀಗ ಹರೀಶ್ ಪೂಜಾರಿಯನ್ನು ಕಳೆದುಕೊಂಡ ಶ್ರೀನಿವಾಸ ಪೂಜಾರಿ-ಸೀತಮ್ಮ ದಂಪತಿ ಹಾಗೂ ಪುತ್ರಿ ಮಿಥಿಲಾಕ್ಷಿಯನ್ನು ಸೋಮವಾರ ಸಂಜೆ ಭೇಟಿಯಾಗಿ ಧೈರ್ಯ ತುಂಬಿದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಶೋಧ ಅವರು, ತಮ್ಮ ಸ್ವ ಇಚ್ಛೆಯಿಂದ ಈ ಮೊತ್ತವನ್ನು ಹರೀಶ್ ಕುಟುಂಬಕ್ಕೆ ನೀಡುತ್ತಿರುವುದಾಗಿ ತಿಳಿಸಿದರಲ್ಲದೆ, ಹರೀಶ್ ಮನೆಯವರೂ ಕೂಡ ನಮ್ಮಂತೆ ಏಕೈಕ ಪುತ್ರನನ್ನು ಕಳೆದುಕೊಂಡಿದ್ದಾರೆ, ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ನೋವಿನಿಂದ ನುಡಿದರು. ತನ್ನ ಮಗನ ಕೊಲೆಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರೀಶ್ ಪೂಜಾರಿಯ ಕೊಲೆ ಆರೋಫಿಗಳನ್ನು ಕೂಡ ತಕ್ಷಣವೇ ಬಂಧಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಇಂತಹ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು, ಎರಡೂ ಕೊಲೆ ಪ್ರಕರಣಗಳನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ಸಂಘಪರಿವಾರ ಸಂಘಟನೆಗಳು ಈಗಾಗಲೇ ಘೋಷಿಸಿದ 10 ಲಕ್ಷ ರೂ ಗಳ ಪೈಕಿ 3 ಲಕ್ಷ ವನ್ನು ಸೋಮವಾರ ಹರೀಶ್ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದಯಕುಮಾರ್ ರಾವ್ ಬಂಟ್ವಾಳ, ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ತಲಾ ಒಂದು ಲಕ್ಷ ರೂ ನ ಚೆಕ್ ಅನ್ನು ಹಸ್ತಾಂತರಿಸಿದರು. ಉಳಿದಂತೆ ಬಾಕಿ ಮೊತ್ತವನ್ನು ಮುಂದಿನ ಎರಡು ದಿನಗಳಲ್ಲಿ ನೀಡುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೇವದಾಸ ಶೆಟ್ಟಿ ತಿಳಿಸಿದ್ದಾರೆ. ಹರೀಶ್ ಪೂಜಾರಿಯ ತಾಯಿ ಮತ್ತು ತಂಗಿಯ ಹೆಸರಿನಲ್ಲಿ ಬಂಟ್ವಾಳ ಕಾರ್ಪೊರೇಶನ್ ಬ್ಯಾಂಕಿನ ಶಾಖೆಯಲ್ಲಿ ಖಾತೆ( ನಂ-020400101018443) ಯನ್ನು ತೆರೆಯಲಾಗಿದೆ. ಈ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ದಾನಿಗಳು ಈ ಖಾತೆ ಗೆ ಧನಸಹಾಯ ನೀಡಬಹುದು ಎಂದವರು ತಿಳಿಸಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಮಾತನಾಡಿ , ತಮಗೆ ದೊರಕಿದ ಪರಿಹಾರ ಮೊತ್ತದಿಂದ ಮೃತ ಹರೀಶ್ ನ ಕುಟುಂಬಕ್ಕೆ ನೆರವು ನೀಡುವ ದಿ.ಪ್ರಶಾಂತ್ ಪೂಜಾರಿ ಹೆತ್ತವರ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಜಿಲ್ಲೆಯಲ್ಲಿ ಕೆಎಫ್ ಡಿ ಹಾಗೂ ಪಿಎಫ್ ಐ ಸಂಘಟನೆಗಳ ಅಟ್ಟಹಾಸ ಎಲ್ಲೆಮೀರಿದೆ. ಇತ್ತೀಚೆಗೆ ಮೂಡಬಿದ್ರೆಯ ಪ್ರಶಾಂತ, ಮಡಿಕೇರಿಯ ಕುಟ್ಟಪ್ಪ ಇದೀಗ ಬಂಟ್ವಾಳದ ಹರೀಶ್ ಅವರ ಕೊಲೆ ನಡೆದಿದ್ದು ಇಂತಹಾ ಕೃತ್ಯಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಾಗಿದೆ ಎಂದು ಒತ್ತಾಯಿಸಿದರು. ಇದೇ ವೇಳೆ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಇದರ ವತಿಯಿಂದಲೂ 30 ಸಾವಿರ ರೂ ನಗದು ಪರಿಹಾರವನ್ನು ಹರೀಶ್ ಕುಟುಂಬಕ್ಕೆ ಕ್ಲಬ್ಬಿನ ಪರವಾಗಿ ಅಧ್ಯಕ್ಷ ಪ್ರಕಾಶ ಅಂಚನ್ ನೀಡಿದರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪ್ರಮುಖರಾದ ದಿನೇಶ್ ಭಂಡಾರಿ, ಪದ್ಮನಾಭ ನಾವೂರ, ಶಿವಪ್ರಸಾದ ಬಂಟ್ವಾಳ, ಮುರಳೀಧರ ಭಟ್ ಮೊದಲಾದವರು ಉಪಸ್ಥಿತರಿದ್ದರು.
