ಬಂಟ್ವಾಳ: ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಹತ್ಯೆಗೀಡಾದ ನಾವೂರು ಗ್ರಾಮದ ಹಳೇಗೇಟು ನಿವಾಸಿ ಹರೀಶ್ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ನೇತೃತ್ವದ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಬುಧವಾರ ಬೆಳಿಗ್ಗೆ ಭೇಟಿ ನೀಡಿ ಮೃತ ಹರೀಶ್ನ ಕ್ಯಾನ್ಸರ್ ಪೀಡಿತ ತಂದೆ ಶ್ರೀನಿವಾಸ ಪೂಜಾರಿ ಹಾಗೂ ಮಗನ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿರುವ ತಾಯಿ ಸೀತಮ್ಮರ ಆರೋಗ್ಯ ತಪಾಸಣೆ ನಡೆಸಿತು.

ಮಂಗಳವಾರ ಹಳೇಗೇಟು ಮನೆಗೆ ಭೇಟಿ ನೀಡಿದ್ದ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಮೃತ ಹರೀಶ್ ಹೆತ್ತವರ ಆರೋಗ್ಯವನ್ನು ತಕ್ಷಣ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ವೈದ್ಯರ ತಂಡ ಮನೆಗೆ ಭೇಟಿ ನೀಡಿ ಇಬ್ಬರ ಆರೋಗ್ಯವನ್ನು ಪರಿಶೀಲಿಸಿತು. ಇಬ್ಬರ ಆರೋಗ್ಯ ಸುಧಾರಣೆಯಾಗುವರೆಗೂ ತಾಲೂಕು ಆರೋಗ್ಯಾಧಿಕಾರಿ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಡಿಎಚ್ಓ ಸೂಚಿಸಿದರು. ಅಲ್ಲದೆ ಸ್ಥಳೀಯ ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯನ್ನು ನೇಮಿಸಿದ್ದು, ಪ್ರತಿನಿತ್ಯ ಎರಡು ಬಾರಿ ಮನೆಗೆ ಭೇಟಿ ನೀಡಿ ಶುಶ್ರೂಷೆ ನೀಡುವಂತೆ ಅವರು ಆದೇಶಿಸಿದರು. ಇಬ್ಬರ ಆರೋಗ್ಯ ಸುಧಾರಣೆಯಾಗುವ ನಿಟ್ಟಿನಲ್ಲಿ ಮನೆಯಲ್ಲಿಯೇ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲು ಜಿಲ್ಲಾ ಆರೋಗ್ಯ ಇಲಾಖೆ ಕ್ರಮಕೈಗೊಂಡಿರುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯ ಪ್ರವೀಣ್ ಬಿ., ಮಂಗಳೂರು ವಿವಿ ಸೆನೆಟ್ ಸದಸ್ಯ ರಿಯಾಝ್ ಹುಸೇನ್, ನಾವೂರು ಗ್ರಾ.ಪಂ ಪಂಚಾಯಿತಿ ಸದಸ್ಯ ಸದಾನಂದ, ಪುರಸಭೆ ಮಾಜಿ ಸದಸ್ಯ ಖಾಸಿಂ, ಡಿಎಫ್ಡಬ್ಲ್ಯುಓ ಡಾ. ಸಿಖಂದರ್ ಪಾಷಾ, ಜಿಲ್ಲಾ ಸರ್ಜನ್ ಡಾ.ರಾಜೇಶ್ವರೀ ದೇವಿ, ಫಿಸಿಶೀಯನ್ ಡಾ.ಈರಪ್ಪ, ತಾಲೂಕು ಆರೋಗ್ಯಾದಿಕಾರಿ ಡಾ. ದೀಪಾ ಪ್ರಭು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ಚಿತ್ರ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಹರೀಶ್ ತಾಯಿ ಆರೋಗ್ಯ ಪರಿಶೀಲಿಸಿದರು.
ಬಿಟಿಡಬ್ಲ್ಯು_ನ18_1