ಮೂಡುಬಿದಿರೆ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನ ಬಳಿ ನಡೆದಿದೆ.
ಸ್ಥಳೀಯ ಅನಿಲ್ ಶೆಟ್ಟಿ ಅವರ ಮಗ, ವಾಣಿವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಆದರ್ಶ ಶೆಟ್ಟಿ(12) ಮೃತ ಪಟ್ಟ ದುರ್ದೈವಿ.

ಬಾವಿಗೆ ಬೆಕ್ಕು ಬಿದ್ದಿದೆ ಎಂದು ಚಿಂತಿತನಾದ ಬಾಲಕ ಮುಂಜಾನೆ 7 ಗಂಟೆ ಸುಮಾರಿಗೆ ಬಾವಿಗೆ ಇಳಿಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಯತ್ನದಲ್ಲಿ ಆತ ಆಯತಪ್ಪಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಈ ನಡುವೆ ಬಾಲಕ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ, ಸ್ಥಳೀಯರೊಡನೆ ಸೇರಿ ಹುಡುಕಲು ಪ್ರಾರಂಭಿಸಿದಾಗ ಮನೆಯ ಬಾವಿ ಸಮೀಪ ಬಾಲಕನ ಚಪ್ಪಲಿಗಳು ಕಂಡಿವೆ. ಬಾವಿಯಲ್ಲಿ ಹುಡುಕಿದಾಗ ಮೃತ ದೇಹ ಪತ್ತೆಯಾಗಿದೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರ್ಶ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಶಾಲೆಯಲ್ಲಿ ಬುಧವಾರ ಬೆಳಗಿನಿಂದ ವಾರ್ಷಿಕೋತ್ಸವ ತಯಾರಿ ನಡೆದಿತ್ತು. ವಿದ್ಯಾರ್ಥಿಯ ಮರಣದ ಸುದ್ದಿ ತಿಳಿಯುತ್ತಲೇ ಕಾರ್ಯಕ್ರಮ ಮುಂದೂಡಲಾಗಿದೆ.
ಎರಡನೇ ಆಘಾತ : ಆದರ್ಶನ ತಂದೆ ಅನಿಲ್ ಶೆಟ್ಟಿ ಕಲ್ಲಮುಂಡ್ಕೂರಿನಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ವಿಮಲಾ ಅಶ್ವತ್ಥಪುರದ ಅಂಗನವಾಡಿ ಕೇಂದ್ರದ ಸಿಬ್ಬಂದಿಯಾಗಿದ್ದಾರೆ. ಈ ದಂಪತಿಯ ಹಿರಿಯ ಮಗ ಮೂಡುಬಿದರೆ ಸಮೀಪದ ಮಾರಿಗುಡಿ ಬಳಿ 3 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಆದರ್ಶನ ಅಗಲಿಕೆಯಿಂದ ಈ ಕುಟುಂಬ ತಮ್ಮ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಆಘಾತಕ್ಕೀಡಾಗಿದೆ.
