ಬಂಟ್ವಾಳ: ಛಾಯಾಗ್ರಾಹಕರು ಎಲ್ಲರಂತಲ್ಲ, ಚಿತ್ರದಾಚೆಗಿನ ಸತ್ಯದ ಹುಡುಕಾಟ ನಡೆಸಬೇಕಾದ ವಿಶಿಷ್ಟ ದೃಷ್ಟಿಯನ್ನು ಸೃಜನಶೀಲ ಛಾಯಾಗ್ರಾಹಕ ಹೊಂದಿರುತ್ತಾನೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮದಲ್ಲಿ ಶನಿವಾರ ಬೆಳಿಗ್ಗೆ ಕಿಶೋರ್‍ರವರ ಅಪರೂಪದ ಛಾಯಾಚಿತ್ರಗಳ “ಬ್ಲಾಗ್” ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರವಿಕಾಣದ್ದನ್ನು ಕವಿ ಕಂಡ ಎಂಬಂತೆ, ಕಿಶೋರ್ ತಮ್ಮ ಕಣ್ಣ ನೋಟದಿಂದ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ, ಛಾಯಾಚಿತ್ರ ಪ್ರದರ್ಶನದಲ್ಲಿರುವ ಎಲ್ಲಾ ಛಾಯಾಚಿತ್ರಗಳು ಮನಮೋಹಕವಾಗಿದ್ದು, ಕಿಶೋರ್ ಅವರ ಸಾಧನೆ ಪ್ರಶಂಸನೀಯ ಎಂದರು. ರಜತವರ್ಷಾಚರಣೆಯ ಸಂದರ್ಭದಲ್ಲಿ ಕಿಶೋರ್ ಅವರ ಸಾಧನೆಗೆ ಪತ್ರಕರ್ತರ ಸಂಘ ಪ್ರೋತ್ಸಾಹದ ಅವಕಾಶ ಒದಗಿಸಿದ ಬಗೆಗೂ ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಬಂಟ್ವಾಳ ವ್ಯವಸಾಯ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಹಿರಿಯಪತ್ರಿಕಾ ಛಾಯಾಗ್ರಾಹಕ ರವಿ ಪೊಸವಣಿಕೆ, ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಛಾಯಾಗ್ರಾಹಕ ಕಿಶೋರ್ ಪೆರಾಜೆ ವೇದಿಕೆಯಲ್ಲಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ರಜತವರ್ಷಾಚರಣಾ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ಸಂಚಾಲಕ ವೆಂಕಟೇಶ್ ಬಂಟ್ವಾಳ ವಂದಿಸಿದರು.
ಕಾರ್ಯಾಗಾರ;
“ರಜತನಡೆಯಲ್ಲೊಂದು ಛಾಯಾಕಿರಣ” ಕಿಶೋರ್ ಪೆರಾಜೆಯವರ ಛಾಯಾಚಿತ್ರಗಳ ಪ್ರದರ್ಶನದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂಆಸಕ್ತರಿಗಾಗಿ ನಡೆದ ಫೊಟೋಗ್ರಫಿ ಕುರಿತ ಕಾರ್ಯಾಗಾರ ವನ್ನು ಟೈಮ್ಸ್ ಆಫ್ ಇಂಡಿಯಾದ ಛಾಯಾಗ್ರಾಹಕ ರವಿಪೊಸವಣಿಕೆ ಯವರು ನಡೆಸಿಕೊಟ್ಟರು. ಪುತ್ತೂರು ವಿವೇಕಾನಂದ ಕಾಲೇಜು, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಹಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡರು.