ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಪ್ರತಿಭಾನ್ವಿತ ಸಂಗೀತ ಶಿಕ್ಷಕಿಯೊಬ್ಬರು ಗುರುಪುರ ಕೈಕಂಬದ ಕಿನ್ನಿಕಂಬ್ಳ ಎಂಬಲ್ಲಿ ಪತಿಯ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉರುಳಿ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಇಲ್ಲಿನ ಭಂಡಾರಿ ಬೆಟ್ಟು ಮರದ ಕೆತ್ತನೆ ಶಿಲ್ಪಿ ಪುರಂದರ ಆಚಾರ್ಯ ಇವರ ಪತ್ನಿ ಪ್ರತಿಭಾನ್ವಿತ ಸಂಗೀತ ಶಿಕ್ಷಕಿ ಹೇಮಾವತಿ ಆಚಾರ್ಯ (44) ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಇವರ ಸಂಬಂಧಿಕರೊಬ್ಬರು ಬೈಕ್ ಅಪಘಾತದಿಂದ ಸಾವನ್ನಪ್ಪಿದ್ದು, ಅವರ ಉತ್ತರಕ್ರಿಯೆಗೆ ಪುರಂದರ ಆಚಾರ್ಯ ಅವರು ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಪತ್ನಿಯೊಂದಿಗೆ ಹೋಗುತ್ತಿದ್ದ ವೇಳೆ ರಸ್ತೆಗೆ ಉರುಳಿ ಬಿದ್ದಿದ್ದಾರೆ ಎನ್ನಲಾಗಿದೆ. ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಪುರಂದರ ಆಚಾರ್ಯ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಬಂಟ್ವಾಳ ಮತ್ತು ಬಿ.ಸಿ.ರೋಡ್ನಲ್ಲಿ ಹಲವಾರು ಮಕ್ಕಳಿಗೆ ಸಂಗೀತ ತರಬೇತಿ ನೀಡುತ್ತಿದ್ದು, ಜಕ್ರಿಬೆಟ್ಟು ಸಾರ್ವಜನಿಕ ಗಣೇಶೋತ್ಸವ ಮತ್ತಿತರ ಸಮಾರಂಭಗಳಲ್ಲಿ ಭಜನೆ ಮತ್ತಿತರ ಕಾರ್ಯಕ್ರಮ ನೀಡುವ ಮೂಲಕ ಜನಪ್ರಿಯರಾಗಿದ್ದರು. ಇಲ್ಲಿನ ವಿಶ್ವಜ್ಯೋತಿ ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆಯಾಗಿದ್ದ ಇವರು ಕ್ರಿಯಾಶೀಲ ಚಟುವಟಿಕೆ ಮೂಲಕ ಗಮನ ಸೆಳೆದಿದ್ದರು. ಮೃತರಿಗೆ ಪತಿ ಸಹಿತ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.