ವಿಜೃಂಭನೆಯಿಂದ ಸಂಭ್ರಮಿಸಲ್ಪಟ್ಟ ಪ್ರತಿಷ್ಠಾಪನಾ ದಿನಾಚರಣೆ
ಮುಂಬಯಿ :ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ.ಎಸ್.ಕೆ.ಬಿ ಅಸೋಸಿಯೇಶನ್, ಸಾಯನ್ ಸಹಭಾಗಿತ್ವದಲ್ಲಿ ಗೋಕುಲ ಶ್ರೀ ಕೃಷ್ಣ ಮಂದಿರದ ಪ್ರತಿಷ್ಠಾಪನಾ ದಿನವು ಕಳೆದ ಶನಿವಾರ ಸಂಭ್ರದಿಂದ ಆಚರಿಸಲ್ಪಟ್ಟಿತು. ಪ್ರಾತಃ ಕಾಲ ನಿತ್ಯ ಪೂಜೆಯ ನಂತರ ಮಂದಿರದ ಅರ್ಚಕ ಶ್ರೀ ಹರಿ ಭಟ್ ಹಾಗೂ ವೇದಮೂರ್ತಿ ಶ್ರೀ ಕೃಷ್ಣರಾಜ ಉಪಾಧ್ಯಾಯರವರ ನೇತೃತ್ವದಲ್ಲಿ ಗಣಹೋಮ, ನವಕಲಶ ಪ್ರತಿಷ್ಠೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನೆರವೇರಿದವು. ನಂತರ ವಿಷ್ಣು ಸಹಸ್ರನಾಮ ಪಠನೆ, ಗೋಕುಲ ಭಜನಾ ಮಂಡಳಿಯವರಿಂದ ಭಜನೆ ಜರಗಿತು. ಮಹಾಪೂಜೆ, ಮಂಗಳಾರತಿ, ತೀರ್ಥ-ಪ್ರಸಾದ ಹಾಗೂ ಪ್ರಸಾದದ ನಂತರ ಎ.ವಿ ಗಣಪತಿ ಹಾಗೂ ಬಳಗವು ಮರಾಠಿ, ಹಿಂದಿ, ಕನ್ನಡ ಭಜನೆ ಶ್ರೋತೃಗಳನ್ನು ಪ್ರಸ್ತುತ ಪಡಿಸಿದರು. ಕಳೆದ ನಾಲ್ಕು ವರ್ಷಗಳ ಹಿಂದೆ ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ನಲ್ಲಿ ನೋಂದಾಯಿಸಿಕೊಂಡ ಗೋಕುಲ ಕಲಾವೃಂದ ಭಜನಾ ಮಂಡಳಿ, ಗೋಕುಲ ಶ್ರೀ ಕೃಷ್ಣ ಮಂದಿರದ ಪ್ರತಿಷ್ಠಾಪನಾ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ತನ್ನ 120ನೇ ಕಾರ್ಯಕ್ರಮವಾಗಿ ಈ ಬಾರಿ ಭರತನಾಟ್ಯ ಕಲಾವಿದೆ ವಿದುಷಿ ಸಹನಾ ಭಾರದ್ವಾಜ್ ರವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ದಾಸರ ಪದಗಳ ಆಧಾರಿತ `ಅಂತ್ಯಾಕ್ಷರಿ ನೃತ್ಯ ಭಜನೆ’ ಕಾರ್ಯಕ್ರಮ ನಡೆಸಿತು. ಇತರೇ ಐದು ಭಜನಾ ಮಂಡಳಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಗೋಕುಲ ಕಲಾವೃಂದ ಭಜನಾ ಮಂಡಳಿ ಮತ್ತು ನವಿ ಮುಂಬಯಿ ವಲಯ ಭಜನಾ ಮಂಡಳಿಯ ನೃತ್ಯಗಳನ್ನು ಸಹನಾ ಭಾರದ್ವಾಜ್, ಗೋಕುಲದ ಸದಸ್ಯ ಭಜನಾ ಮಂಡಳಿಗಳಾದ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ ವಲಯದ ನೃತ್ಯವನ್ನು ಗೀತಾ ಎಲ್ ಭಟ್, ಮಧ್ವೇಶ ಭಜನಾ ಮಂಡಳಿ, ಸಾಂತಾಕ್ರೂಜ್, ನೃತ್ಯವನ್ನು ಪ್ರಭಾ ಬೆಟಗೇರಿ, ವಿಠಲ ಭಜನಾ ಮಂಡಳಿ, ಮೀರಾ ರೋಡ್ ನೃತ್ಯವನ್ನು ಮೇಘನಾ ಆಚಾರ್ಯ ನಿರ್ದೇಶಿಸಿದ್ದರು. 5 ರಿಂದ 85 ವಯಸ್ಸಿನ ಸದಸ್ಯ/ಸದಸ್ಯೆಯರು ಭಾಗವಹಿಸಿದ ನೃತ್ಯಗಳಲ್ಲಿ, ಬೇರೆ ಬೇರೆ ಸಾಧನಗಳನ್ನು ಬಳಸಿಕೊಂಡು ಸುಮಾರು 13 ಹರಿದಾಸರು ವಿರಚಿಸಿದ ಭಕ್ತಿ ಗೀತೆಗಳಿಗೆ ಮಾಡಿದ ಅಭಿನಯ ನೃತ್ಯಗಳು ಪ್ರೇಕ್ಷಕರಿಂದ ಪ್ರಚಂಡ ಕರತಾಡನದ ಮೆಚ್ಚುಗೆಯನ್ನು ಪಡೆಯಿತು. ಪ್ರೇಮಾ ರಾವ್ ಸಹನಾ ಪೆÇೀತಿ, ಸಹನಾ ಭಾರದ್ವಾಜ್ ಕಾರ್ಯಕ್ರಮದ ನಿರೂಪಣೆ ಗೈದರು. ರಾತ್ರಿ ನಿತ್ಯ ಪೂಜೆಯ ನಂತರ ರಂಗ ಪೂಜೆಯಾದ ನಂತರ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆಯು, ರಾಮದಾಸ್ ಬಳಗದವರಿಂದ, ಸ್ಯಾಕ್ಸೋಫೋನ್, ಚೆಂಡೆ, ಭಜನಾ ಮಂಡಳಿಯವರಿಂದ ಕೋಲಾಟ, ಲೇಜಿಮ್, ನೃತ್ಯಗಳೊಂದಿಗೆ ವೈಭವೋಪೇತವಾಗಿ ನೆರವೇರಿತು.ತೀರ್ಥ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



