ಬಂಟ್ವಾಳ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಾರ್ವತ್ರಿಕ ಪ್ರಶ್ನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮರ್ಪಕ ಮಾಹಿತಿ ಜೊತೆಗೆ ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಸಾಮಾಜಿಕ ನ್ಯಾಯಪರ ಸಮಿತಿ ವತಿಯಿಂದ ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮಿತಿ ಅಧ್ಯಕ್ಷ ಕೃಷ್ಣ ಅಲ್ಲಿಪಾದೆ ಮಾತನಾಡಿ, ಜಿಲ್ಲೆಯ ಜನರನ್ನು ಕತ್ತಲೆಯಲ್ಲಿರಿಸಿ ಜೀವನದಿ ಬರಿದುಗೊಳಿಸುವ ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ತೀವ್ರ ವಿರೋಧದ ನಡುವೆಯೂ ಕಾಮಗಾರಿ ಮುಂದುವರಿಸಲು ಸರ್ಕಾರ ಆತುರತೆ ತೋರುತ್ತಿದೆ ಎಂದು ಟೀಕಿಸಿದರು. ಈಗಾಗಲೇ ಜಿಲ್ಲೆಯಾದ್ಯಂತ ಹಲವಾರು ಸಂಘಟನೆಗಳು ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರೂ, ಸರ್ಕಾರ ಮಾತ್ರ ಕಿಂಚಿತ್ ಸ್ಪಂದನೆ ನೀಡಿಲ್ಲ. ಇದಕ್ಕಾಗಿ ಜವಾಬ್ದಾರಿಯುತ ಜನಪ್ರತಿನಿಧಿಗಳು ಜನತೆಗೆ ಉತ್ತರಿಸುವುದಕ್ಕಾಗಿ ವಿವಿಧ ಪ್ರಶ್ನೆಗಳನ್ನು ಅವರ ಮುಂದಿಟ್ಟಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಜಿಲ್ಲೆಯ ಜನಪ್ರತಿನಿಧಿಗಳು ದ್ವಂದ್ವ ರೀತಿಯ ಹೇಳಿಕೆ ನೀಡುತ್ತಿದ್ದು, ಯೋಜನೆಗೆ ಕಾಂಗ್ರೆಸ್- ಬಿಜೆಪಿ ಸಮಾನ ಹೊಣೆಗಾರರು ಎನ್ನುವ ಮೂಲಕ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಹಿರಂಗ ಪ್ರಶ್ನೆ:
ಯೋಜನಾ ಪ್ರದೇಶದಲ್ಲಿ ಒಟ್ಟು 9.55 ಟಿಎಂಸಿ ನೀರು ಲಭ್ಯವಿದ್ದು, ಇದರಲ್ಲಿ 1.25ಟಿಎಂಸಿ ನೀರು ಮಾತ್ರ ಪೂರ್ವಕ್ಕೆ ಸಾಗಿಸಲು ಸಾಧ್ಯ. ಆದರೆ 24ಟಿಎಂಸಿ ನೀರು ಎಲ್ಲಿಂದ ಪೂರೈಸಲಾಗುತ್ತಿದೆ….?
600 ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಲಾಗಿದೆಯೇ…? ಈ ಯೋಜನೆಯಿಂದ ಜಿಲ್ಲೆಯ ಜನಜೀವನದ ಮೇಲೆ ಉಂಟಾಗುವ ದುಷ್ಪರಿಣಾಮ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ…?
ಈ ಯೋಜನೆ ಪೂರ್ಣಗೊಂಡಲ್ಲಿ ಒಟ್ಟು 370ಎಂಡಬ್ಲ್ಯೂ ವಿದ್ಯುತ್ ಶಕ್ತಿ ಅವಶ್ಯಕತೆ ಇದ್ದು, ಇದರ ಪೂರೈಕೆ ಹೇಗೆ ಮಾಡಲಾಗುತ್ತದೆ…?
ಆನೆ ಕಾರಿಡಾರ್ ಸಂರಕ್ಷಣಾ ಕ್ರಮಗಳೇನು….?
ಈ ಯೋಜನೆ ವಿಫಲವಾದರೆ ಉಂಟಾಗುವ ರೂ 91 ಸಾವಿರ ಕೋಟಿ ಮೊತ್ತದ ನಷ್ಟಕ್ಕೆ ಯಾರು ಹೊಣೆ….? ಮೀನುಗಾರಿಕೆ ಮೇಲಾಗುವ ಅಡ್ಡ ಪರಿಣಾಮ ಬಗ್ಗೆ ಅಧ್ಯಯನ ಮಾಡಲಾಗಿದೆಯೇ ಹೀಗೆ ಒಟ್ಟು ಹನ್ನೊಂದು ಪ್ರಶ್ನೆಗಳನ್ನು ಈಗಾಗಲೇ ಸಚಿವ ಬಿ.ರಮಾನಾಥ ರೈಯವರಿಗೆ ಸಮಿತಿ ಸಲ್ಲಿಸಿದ್ದು, ಇದಕ್ಕೆ ಸಮರ್ಪಕ ಉತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯುವ ಮುಖಂಡ ಹಾರೂನ್ ರಶೀದ್ ಮಾತನಾಡಿ, ನಮ್ಮ ನದಿ ನೀರನ್ನು ಬಯಲು ಸೀಮೆಗೆ ಕೊಡುವ ಅಧಿಕಾರ ಇವರಿಗೆ ಕೊಟ್ಟವರು ಯಾರು….? ಮತದಾರರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎನ್ನುತ್ತಿರುವ ಇಲ್ಲಿನ ಸಚಿವರು ಇದ್ದರೂ ನಮಗೇನು ಪ್ರಯೋಜನ? ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ ನಮ್ಮ ಜನರ ಪರಿಸ್ಥಿತಿ ಎಂದು ಅವರು ಟೀಕಿಸಿದರು.
ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಮಾತನಾಡಿ, ಚುನಾವಣಾ ನೀತಿ ಸಂಹಿತೆಯಿಂದಾಗಿ 2 ಬಾರಿ ಈ ಪ್ರತಿಭಟನೆ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಪ್ರತಿಭಟನೆಗೆ ಚಾಲನೆನೀಡಲಾಗಿದ್ದು, ಇದು ನಿರಂತರವಾಗಿ ನಡೆಯಲಿದೆ ಎಂದು ಅವರು ಎಚ್ಚರಿಸಿದರು. ಮುಂದಿನ ಹದಿನೈದು ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗದೇ ಇದ್ದಲ್ಲಿ ಸಚಿವರ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಪ್ರಮುಖರಾದ ದಿವಾಕರ ಕೊಳಕೆ, ಚಂದ್ರಶೇಖರ ಮಾಣಿಮಜಲ್, ಸಿಪ್ರಿಯನ್ ಗಲ್ಬಾವೊ ಲೊರೆಟ್ಟೊ, ತಿಮ್ಮಪ್ಪ ಪೂಜಾರಿ ಸಿದ್ದಕಟ್ಟೆ, ರಮೇಶ ದೈಪಲ, ಆನಂದ ಕುಲಾಲ್ ಪಲ್ಲಮಜಲು, ಸಂಜೀವ ಮಡಿವಾಳ ಬಿ.ಸಿ.ರೋಡ್, ಅಚ್ಚುತ ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ, ನಗರ ಠಾಣೆ ಮತ್ತು ಮೆಲ್ಕಾರ್ ಸಂಚಾರಿ ಪೆÇಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು..