ಮೂಡುಬಿದರೆ: ಕಾಷ್ಟಶಿಲ್ಪಿ, ಹವ್ಯಾಸಿ ಯಕ್ಷಗಾನ ಕಲಾವಿದ ನೀರ್ಕೆರೆ ವಾಸುದೇವ ಆಚಾರ್ಯ (69) ಮಾ. 25ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ. ನುರಿತ ಕಾಷ್ಟ ಶಿಲ್ಪಿಯಾಗಿ ಅಶ್ವತ್ಥಪುರ, ಮಿಜಾರು , ಮೂಡಬಿದಿರೆ ಸಹಿತ ಹಲವಾರು ಕಡೆಗಳ ದೇವಸ್ಥಾನ, ದೈವಸ್ಥಾನ, ಅತಿಥಿಗೃಹ ಮೊದಲಾದ ವಿವಿಧ ಬಗೆಯ ಕಟ್ಟಡಗಳನ್ನು ವಾಸ್ತುಪ್ರಕಾರ ನಿರ್ಮಿಸಿಕೊಟ್ಟ, ಮರದ ಕರಾರುವಕ್ಕಾದ ಲೆಕ್ಕಾಚಾರವನ್ನು ಹೊಂದಿದ್ದರು.

ವಾಸುದೇವ ಆಚಾರ್ಯರು ತಮ್ಮ ಕಾರ್ಯಕುಶಲತೆಗಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿಯವರೇ ಮೊದಲಾದ ಗಣ್ಯರಿಂದ ಸಮ್ಮಾನಿಸಲ್ಪಟ್ಟವರು; ಕಲಾ ಸೇವೆಗಾಗಿ ಸಮ್ಮಾನಗಳನ್ನೂ ಸ್ವೀಕರಿಸಿದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ವಿದ್ವಾನ್ ಕೆ. ಕಾಂತ ರೈ, ಸಂಪಿಗೆ ಮಾಧವ ಜೋಶಿ, ಎನ್. ಮಾಧವ ಶೆಟ್ಟಿ ಮೊದಲಾದವರೊಡನೆ ಅರ್ಥ ಹೇಳಿದ, ಹಲವಾರು ಪಾತ್ರಗಳ ಮೂಲಕ ವೇಷಧಾರಿಯಾಗಿಯೂ ಹೆಜ್ಜೆ ಹಾಕಿದ್ದ, ಎಲ್ಲಕ್ಕಿಂತಲೂ ಮುಖ್ಯವಾಗಿ ಕಾರ್ಯಕ್ರಮಗಳ ಸಂಘಟಕರಿಗೆ ಬೆಂಬಲವಾಗಿ ನಿಲ್ಲುತ್ತಿದ್ದ ಶ್ರದ್ಧೆಯ ಪರಿಚಾರಕ ಅವರಾಗಿದ್ದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ, ಯಕ್ಷ ಚೈತನ್ಯ, ಮೂಡುಬಿರೆಯ ಯಕ್ಷ ಸಂಗಮ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ, ನಿಡ್ಡೋಡಿ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ, ಕಟೀಲು ಕ್ಷೇತ್ರ, ಮಿಜಾರಿನ ತುಳುನಾಡ ಯುವಕ ಮಂಡಲ, ನವೋದಯ ಯುವಕ ಮಂಡಲ, ಗೋಪಾಲಕೃ ಷ್ಣ ದೇವಸ್ಥಾನ, ಕೊಲಕಾಡಿ, ಮೂಲ್ಕಿ, ರಾಯಿ, ಬೋಳ, ಜೋಕಟ್ಟೆ ಮೊದಲಾದೆಡೆ ಅವರು ಅರ್ಥಧಾರಿಗಳಾಗಿ ಇಲ್ಲವೇ ಸಂಘಟಕರೊಂದಿಗೆ ಕಲಾಪರಿಚಾರಕರಾಗಿ ಸೇವೆ ಸಲ್ಲಿಸಿದವರು ಅವರು. ಮೂಡಬಿದರೆ ಶ್ರೀಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ನಡೆದ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.
–