ಹೈಮಾಸ್ಟ್ ದೀಪ ಸ್ಥಳಾಂತರಕ್ಕೆ ಆಗ್ರಹ
ಬಂಟ್ವಾಳ:ತಾಲೂಕಿನ ರಾಯಿ ಪೇಟೆ ಸರ್ಕಾರಿ ಬಾವಿ ಪಕ್ಕದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆ ಅಳವಡಿಸಿರುವ ಹೈಮಾಸ್ಟ್ ದೀಪದಿಂದ ಬಾವಿಗೆ ವಿವಿಧ ಬಗೆಯ ಪತಂಗ ಮತ್ತಿತರ ಕೀಟಗಳು ಬೀಳುತ್ತಿದೆ. ಇದರಿಂದಾಗಿ ನೀರು ಕಲುಷಿತಗೊಂಡು ಕುಡಿಯಲು ಅಸಾಧ್ಯವಾಗಿದೆ. ಮಾತ್ರವಲ್ಲದೆ ರಾಯಿ ಪೇಟೆ ರಸ್ತೆಗೆ ದೂರದಲ್ಲಿ ಅಳವಡಿಸಿರುವ ಈ ಹೈಮಾಸ್ಟ್ ದೀಪದಿಂದ ಪೇಟೆಯುದ್ದಕ್ಕೂ ಬೆಳಕು ಕಾಣುತ್ತಿಲ್ಲ. ಇದರಿಂದಾಗಿ ಹೈಮಾಸ್ಟ್ ದೀಪವನ್ನು ಕೂಡಲೇ ತೆರವುಗೊಳಿಸಿ ಇಲ್ಲಿನ ಬಸ್ನಿಲ್ದಾಣ ಬಳಿ ಅಳವಡಿಸಬೇಕು ಎಂಬ ಆಗ್ರಹ ರಾಯಿ ಗ್ರಾಮ ಸಭೆಯಲ್ಲಿ ಕೇಳಿ ಬಂದಿದೆ.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಸ್ಥಳೀಯ ಸದಸ್ಯ ರಾಘವ ಅ
ಮೀನ್ ಮತ್ತು ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ವಿಷಯ ಪ್ರಸ್ತಾಪಿಸಿದರು. ಇದೇ ವೇಳೆ ಆಡಳಿತ (ಬಿಜೆಪಿ) ಮತ್ತು ವಿರೋಧ ಪಕ್ಷ (ಕಾಂಗ್ರೆಸ್) ಸದಸ್ಯರ ನಡುವೆ ಪರಸ್ಪರ ಚರ್ಚೆ ಮತ್ತು ವಾಗ್ವಾದ ನಡೆದು ಬಳಿಕ ತೆರವುಗೊಳಿಸುವ ಬಗ್ಗೆ ಸಭೆ ನಿರ್ಣಯಿಸಿತು.
ಇನ್ನೊಂದೆಡೆ ಗ್ರಾಮಸಭೆಗೆ ಮುಂಚಿತವಾಗಿ ಪ್ರತೀ ವಾರ್ಡಿನಲ್ಲಿ ಏಕೆ ವಾರ್ಡ್ ಸಭೆ ನಡೆಸುತ್ತಿಲ್ಲ ಎಂದು ಸ್ಥಳೀಯ ಕೊಯಿಲಗುತ್ತು ನಿವಾಸಿ ಅನಂತ ರಾವ್ ಅವರು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಇಲ್ಲಿನ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಕೂಡಾ ಪಂಚಾಯಿತಿ ಸದಸ್ಯರಂತೆ ಜನತೆ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಪದ್ಮನಾಭ ಗೌಡ, ಜಗದೀಶ ಕೊಯಿಲ, ಕುಸುಮ, ಶೋಭಾ ನೋಣಯ, ಸುನಂದ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ನೋಡೆಲ್ ಅಧಿಕಾರಿ ನಾರಾಯಣ ಶೆಟ್ಟಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.