ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕಿನ 210ನೇ ವಾರ್ಷಿಕೋತ್ಸವದ ಅಂಗವಾಗಿ ಇದರ ಬಿ.ಸಿ.ರೋಡಿನ ಶಾಖೆಯ ವತಿಯಿಂದ ಸೋಲಾರ್ ದೀಪ ಹಸ್ತಾಂತರ ಹಾಗೂ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ಸಜೀಪಮುನ್ನೂರು ಗ್ರಾಮಪಂಚಾಯಿತಿನಲ್ಲಿ ನಡೆಯಿತು.

ಬಿ.ಸಿ.ರೋಡು ಶಾಖೆಯ ವ್ಯವಸ್ಥಾಪಕ ಅತುಲ್ ಕರ್ಕರೆ ಸಜೀಪಮುನ್ನೂರು ಗ್ರಾಮಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಶರೀಫ್ ನಂದಾವರ ಅವರಿಗೆ ಗಿಡ ನೀಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪಂಚಾಯಿತಿ ಕಚೇರಿ ಆವರಣದಲ್ಲಿ ಗಿಡ ನೆಟ್ಟು ಸಾರ್ವಜನಿಕರಿಗೂ ವಿತರಿಸಲಾಯಿತು. ಬ್ಯಾಂಕ್ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ ಅಳವಡಿಸಿ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಮಹೇಶ್ ನಾಯಕ್ ಬ್ಯಾಂಕಿನ ಉದ್ದೇಶ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಪಂಚಾಯಿತಿನ ಉಪಾಧ್ಯಕ್ಷೆ ನಳಿನಿ, ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಬಸವರಾಜು ಬಿ.ಓ, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.