ಬಂಟ್ವಾಳ: ಪುರಸಭಾ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಮುಂದಿನ ಎಂಟು ತಿಂಗಳ ಒಳಗಾಗಿ ಮುಕ್ತಿ ಸಿಗಲಿದೆ, ನಿರ್ಮಾಣ ಹಂತದಲ್ಲಿರುವ ಕಂಚಿನಡ್ಕ ಪದವಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುವುದು, ಈ ನಿಟ್ಟಿನಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದೆ ಎಂದು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್ ಬಂಟ್ವಾಳ ಹಾಗೂ ಪತ್ರಕರ್ತರ ಸಂಘದ ರಜತ ವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಶನಿವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ “ಬಂಟ್ವಾಳ ಸ್ವಚ್ಛತೆ” ಆದ್ಯತೆ- ಸಾಧ್ಯತೆ” ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪುರಸಭಾ ಆಡಳಿತ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿದ್ದು, ಪ್ರತೀ ವಾರ್ಡ್ ಗಳಲ್ಲಿಯೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಿರ್ಮಲ ಬಂಟ್ವಾಳದ ಮೂಲ ಆಶಯವನ್ನು ಸಾಕಾರಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಸ್ವಚ್ಛತೆಯ ವಿಚಾರದಲ್ಲಿ ಪುರಸಭೆಯ ಆಶಯಕ್ಕೆ ತ್ಯಾಜ್ಯ ವಿಲೇವಾರಿಯ ಗುತ್ತಿಗೆದಾರರಿಂದ ಯಾವರೀತಿಯ ಸ್ಪಂದನೆ ದೊರೆತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಉತ್ತರಿಸಿದರು. ಈ ಕುರಿತಾಗಿ ಪುರಸಭಾ ಆಡಳಿತ ಗುತ್ತಿಗೆದಾರರ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆ, ಪುರಸಭೆಯಿಂದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ, ಆದರೆ ಸ್ವಚ್ಛತೆಯ ವಿಚಾರದಲ್ಲಿ ಮುಂದೆಯೂ ನಿರ್ಲಕ್ಷ್ಯ ತೋರಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದರು. ತಾನು ಅಧಿಕಾರ ವಹಿಸಿಕೊಂಡ ದಿನದಿಂದ ಪುರಸಭೆಯ ಸ್ವಚ್ಛತಾ ಕಾರ್ಯಕ್ರಮಗಳಿಗೆ ವಿಶೇಷ ಆದ್ಯತೆ ನೀಡಿದ್ದೇನೆ ಎಂದ ಅವರು, ತನ್ನ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನ ಬಂಟ್ವಾಳ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿಸುವುದಾಗಿ ತಿಳಿಸಿದರು.
ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಪಂಚಾಯತ್ ವಿರೋಧ ವ್ಯಕ್ತಪಡಿಸುತ್ತಿದೆ, ಆದರೆ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಘಟಕ ಆರಂಭಕ್ಕೆ ಪುರಸಭಾ ಆಡಳಿತ ಬದ್ಧವಾಗಿದೆ ಎಂದವರು ವಿವರ ನೀಡಿದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಯವರು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪತ್ರಕರ್ತರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾಗುತ್ತಿರುವುದು ಅಭಿನಂದನೀಯ ಎಂದರು.
ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ಭಟ್ ಮಾತನಾಡಿ, ನಿರ್ಮಲ ಬಂಟ್ವಾಳ, ಸುಂದರ ಬಂಟ್ವಾಳದಂತಹಾ ಕನಸು ಸಾಕಾರಗೊಳ್ಳಲು, ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ನಾಗರೀಕರು ಮತ್ತು ಸಂಘ ಸಂಸ್ಥೆಗಳ ಸಹಕಾರವೂ ಅತ್ಯಗತ್ಯವಾಗಿದೆ. ಈಗಾಗಲೇ ಪುರಸಭೆ ವತಿಯಿಂದ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಸ್ವಚ್ಛತೆಯ ವಿಚಾರದಲ್ಲಿ ಪುರಸಭೆಯ ಜೊತೆ ಸಾರ್ವಜನಿಕರೂ ಕೈ ಜೋಡಿಸಬೇಕೆಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಕಟ್ಟಡ ನಿರ್ಮಾಣ, ಚರಂಡಿ ರಚನೆ, ರಸ್ತೆ ಅಗಲೀಕರಣದಂತಹಾ ಕಾರ್ಯಗಳಲ್ಲಿ ಪ್ರಾಧಿಕಾರದ ನಿಯಮಗಳನ್ನು ಪಾಲಿಸುವ ಮೂಲಕ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎನ್ನುತ್ತಾ, ಬಂಟ್ವಾಳ ಪುರಸಭೆಯಲ್ಲಿ ರಸ್ತೆ ಅಗಲವಿಲ್ಲ ಎನ್ನುವ ಕಾರಣಕ್ಕೆ ತ್ಯಾಜ್ಯ ವಿಲೇವಾರಿಯಿಂದ ದೂರವುಳಿದಿರುವ ಪ್ರದೇಶವನ್ನು ಉಲ್ಲೇಖಿಸಿದರು. ನಮ್ಮ ಪರಿಸರ ಸ್ವಚ್ಛತೆಯಿಂದ ಇರಬೇಕು ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಮಾತ್ರ ಪುರಸಭೆಯ ಪ್ರಯತ್ನಕ್ಕೆ ಫಲ ಸಿಗುತ್ತದೆ, ಪುರಸಭಾ ಆಡಳಿತವೂ ತ್ಯಾಜ್ಯವಿಲೇವಾರಿಯ ದೃಷ್ಟಿಯಲ್ಲಿ ತಂತ್ರಜ್ಞಾನಗಳನ್ನು ಬಳಸುವುದಕ್ಕೆ ಆದ್ಯತೆ ನೀಡಬೇಕು ಎಂದರು.
ದೈಜಿವರ್ಲ್ಡ್ ಸುದ್ದಿವಾಹಿನಿಯ ಕಾರ್ಯಕ್ರಮ ನಿರೂಪಕ ಚೇತನ್ ಕುಮಾರ್ ಸಂವಾದವನ್ನು ತಮ್ಮ ಪ್ರಖರ ಮಾತುಗಾರಿಕೆ ಹಾಗೂ ನಿರೂಪಣಾ ಶೈಲಿಯಿಂದ ನಡೆಸಿಕೊಟ್ಟರು. ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಪ್ರಸ್ತಾವನೆಯೊಂದಿಗೆ, ಸ್ವಾಗತಿಸಿದರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗೋಪಾಲ ಅಂಚನ್ ವಂದಿಸಿದರು. ರಜತವರ್ಷಾಚರಣಾ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಪದಾಧಿಕಾರಿಗಳಾದ ನಿಶಾಂತ್ ಬಿಲ್ಲಂಪದವು, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ, ರತ್ನದೇವ್ ಪೂಂಜಾಲಕಟ್ಟೆ, ಸದಸ್ಯರಾದ ಯಾದವ ಅಗ್ರಬೈಲು, ಸೂರ್ಯನಾರಾಯಣ ಪೂವಳ, ವಾಮನ ಪೂಜಾರಿ, ಇಂತಿಯಾಝ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು.