ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧೆಡೆ ಡೆಂಗೆ ಮತ್ತಿತರ ಜ್ವರಬಾಧೆಗೆ ಹಲವಾರು ಮಂದಿ ತುತ್ತಾಗಿದ್ದರೂ ಇಲ್ಲಿನ ಗುತ್ತಿಗೆ ಆಧಾರಿತ ವೈದ್ಯರು ಮಾತ್ರ ಅಘೋಷಿತ ರಜೆ ಮಾದರಿಯಲ್ಲಿ ಪದೇ ಪದೇ ಗೈರು ಹಾಜರಾಗುತ್ತಿದ್ದಾರೆ. ಇದರಿಂದಾಗಿ ಕೂಡಲೇ ಇವರನ್ನು ತೆರವುಗೊಳಿಸಿ ಖಾಯಂ ವೈದ್ಯರನ್ನು ನೇಮಕಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಈಚೆಗಷ್ಟೇ ಗುತ್ತಿಗೆ ಆಧಾರಿತ ನೆಲೆಯಲ್ಲಿ ನಿಯೋಜನೆಗೊಂಡಿರುವ ಡಾ.ಆನ್ಸಿಲಾ ಪತ್ರಾವೊ ಅವರು ಪ್ರತಿದಿನ ನಿಗದಿತ ಸಮಯಕ್ಕೆ ಬಾರದೆ ಪದೇ ಪದೇ ಗೈರು ಹಾಜರಾಗುತ್ತಿರುವ ಪರಿಣಾಮ ನಾಗರಿಕರು ಸಿದ್ಧಕಟ್ಟೆ ಮತ್ತು ಬಂಟ್ವಾಳ ಖಾಸಗಿ ವೈದ್ಯರನ್ನು ಅವಲಂಭಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಇನ್ನೊಂದೆಡೆ ಮಹಿಳಾ ಮತ್ತು ಪುರುಷ ಸಹಾಯಕ ಶುಶ್ರೂಷಕರು, ಫಾರ್ಮ ಸಿಸ್ಟ್, ಕ್ಲರ್ಕ್ ಮತ್ತಿತರ ಹುದ್ದೆಗಳೂ ಖಾಲಿ ಇದೆ ಎಂದು ಆರೋಪಿಸಿದರು.
ಇದೇ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮತ್ತು ಪಂಜಿಕಲ್ಲು ಆಡಳಿತ ವೈದ್ಯಾಧಿಕಾರಿ ಡಾ.ರಾಮ್ರಾಜೇಶ್ ಧಾವಿಸಿ ಬಂದು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಈಗಾಗಲೇ ಇಲ್ಲಿನ ವೈದ್ಯೆ ಡಾ.ಆನ್ಸಿಲಾ ಪತ್ರಾವೊ ಇವರಿಗೆ ಎರಡು ಬಾರಿ ಎಚ್ಚರಿಕೆ ನೋಟೀಸು ನೀಡಿದ್ದು, ಇದೀಗ ಮೂರನೇ ಎಚ್ಚರಿಕೆ ನೋಟೀಸು ನೀಡಿದ ಬಳಿಕ ಅವರನ್ನು ತೆರವುಗೊಳಿಸಲಾಗುವುದು. ವಾರದಲ್ಲಿ ಮೂರು ದಿನ ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಮ್ರಾಜೇಶ್ ಅವರನ್ನು ನಿಯೋಜಿಸುವುದಾಗಿ ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ, ಇಂದಿರಾ ಮಧುಕರ ಬಂಗೇರ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಪ್ರಮುಖರಾದ ಸಂತೋಷ್ ಕುಮಾರ್ ಬೆಟ್ಟು, ರಮಾನಾಥ ರಾಯಿ, ಮಧುಕರ ಬಂಗೇರ, ಸತೀಶ ಬೊಲ್ಪೊಟ್ಟು, ಸವಿನ್ ಕುಮಾರ್ ಜೈನ್, ಪರಮೇಶ್ವರ ಪೂಜಾರಿ, ಚಂದಪ್ಪ ಪೂಜಾರಿ, ವಸಂತ ಪೂಜಾರಿ, ಸಂದೀಪ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.