ಬಂಟ್ವಾಳ:ತಾಲೂಕಿನ ಮೂಡುಪಡುಕೋಡಿ ಗ್ರಾಮದ ಸೇವಾ ಚಾಂದ್ ಸಾಹೇಬ್ ಅವರ ನಿವಾಸದಲ್ಲಿ ಜು.28 ತಡರಾತ್ರಿ ಕಳ್ಳತನ ನಡೆದಿದೆ.ಮನೆಮಂದಿ ಕಾರ್ಯಕ್ರಮಕ್ಕೆ ಹೊರಗೆ ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಹಿಂಬಾಗಿಲಿನ ಚಿಲಕ ಮುರಿದು ಒಳಹೊಕ್ಕ ಕಳ್ಳರು ಮನೆಯೊಳಗೆ ಜಾಲಾಡಿ ಕಪಾಟಿನಲ್ಲಿದ್ದ ಸುಮಾರು 4 ಲ.ರೂ ಮೌಲ್ಯದ ಚಿನ್ನಾಭರಣ ಹಾಗೂ 2ಮೊಬೈಲ್ ಪೋನ್‍ಗಳು, ವ್ಯಾನಿಟಿ ಬ್ಯಾಗ್‍ಗಳನ್ನು ಕದ್ದೊಯ್ದಿದ್ದಾರೆ. ಈ ಮನೆಯ ಸನಿಹದಲ್ಲಿಯೇ ಚಾಂದ್ ಸಾಹೇಬರ ತಂದೆ ಮನೆಯಿದ್ದು ತಂದೆಯ ತಿಥಿ ಕಾರ್ಯಕ್ರಮಕ್ಕೆ ಮನೆಮಂದಿ ಸಂಜೆ ತೆರಳಿದ್ದರು. ರಾತ್ರಿ ಎರಡೂವರೆ ಗಂಟೆ ಸುಮಾರಿಗೆ ಮನೆ ಮಂದಿ ಮನೆಗೆ ಬಂದಾಗಲೆ ಕಳ್ಳತನ ಬೆಳಕಿಗೆ ಬಂದಿದೆ.ಬೆಳಗ್ಗೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ. ಪುಂಜಾಲಕಟ್ಟೆ ಪ್ರಭಾರ ಠಾಣಾಧಿಕಾರಿ ಗಿರಿಯಪ್ಪ ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್‍ಪಿ ರವೀಶ್ ಸಿ.ಆರ್.,ಬಂಟ್ವಾಳ ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ್ಯ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಶ್ವಾನ ದಳ ಕರೆಸಲಾಗಿದೆ.ಸ್ಥಳೀಯರ ಕೈವಾಡ ಇದೆ ಎಂದು ಪೋಲೀಸರು ಶಂಕಿಸಿದ್ದಾರೆ. ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ,ಬಿ. ಪದ್ಮಶೇಖರ ಜೈನ್, ಅಕ್ರಮ-ಸಕ್ರಮ ಸದಸ್ಯ ಮಾಯಿಲಪ್ಪ ಸಾಲ್ಯಾನ್,ಗ್ರಾ.ಪಂ.ಸದಸ್ಯ ಶಂಕರ ಶೆಟ್ಟಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.