ಬಂಟ್ವಾಳ: ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿ ಸಾಧಿಸಿದರೆ ಜೀವನದಲ್ಲೂ ಸಾಧನೆ ಮಾಡಬಹುದು ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್‍ಪಿ ರವೀಶ್ ಸಿ.ಆರ್ ಹೇಳಿದರು. ಅವರು ಟ್ರಾಫಿಕ್ ಠಾಣೆಯಲ್ಲಿ ಎ.ಎಸ್. ಐ ಆಗಿ ಸೇವೆ ಸಲ್ಲಿಸಿ ಪೂಂಜಾಲಕಟ್ಟೆ ಠಾಣೆಗೆ ಎಸ್.ಐ ಆಗಿ ಮುಂಭಡ್ತಿ ಗೊಂಡು ವರ್ಗಾವಣೆಯಾದ ರಾಮ ನಾಯ್ಕ್‍ರವರ ಬೀಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವಕಾಶಗಳನ್ನು ಸದುಪಯೋಗಿಸಿಕೊಂಡು ಮುನ್ನಡೆದಾಗ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ರಾಮ ನಾಯ್ಕ್‍ರವರೇ ಸಾಕ್ಷಿ. ಇಲಾಖೆಯ ಎಲ್ಲಾ ಸಿಬ್ಬಂದಿಗಳು ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿ ಇಲಾಖೆಯ ಗೌರವವನ್ನು ಹೆಚ್ಚಿಸಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಬಂಟ್ವಾಳ ವೃತ್ತನಿರೀಕ್ಷಕ ಮಂಜಯ್ಯ, ಗ್ರಾಮಾಂತರ ಠಾಣಾ ಎಸ್.ಐ ರಕ್ಷಿತ್, ನಗರಠಾಣಾ ಎಸ್.ಐ ನಂದಕುಮಾರ್, ಅಪರಾಧ ಪತ್ತದಳ ವಿಭಾಗದ ಎಸ್.ಐ ಗಂಗಾಧರಪ್ಪ ಉಪಸ್ಥಿತರಿದ್ದರು. ಟ್ರಾಫಿಕ್ ಎಸ್.ಐ. ಚಂದ್ರಶೇಖರಯ್ಯ ಸ್ವಾಗತಿಸಿ, ಮನೋಹರ ವಂದಿಸಿದರು. ಎ.ಎಸ್.ಐ ಕುಟ್ಟಿ ಎಮ್.ಕೆ. ಕಾರ್ಯಕ್ರಮ ನಿರೂಪಿಸಿದರು.