ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ಇಲ್ಲಿನ ಗ್ರಾ.ಪಂ ಅಧ್ಯಕ್ಷರಿಗೆ ಮದ್ಯ ಮಾರಾಟಗಾರರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದು ಹಲ್ಲೆಗೆ ಸಂಚು ನಿರೂಪಿಸುತ್ತಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ರವಿವಾರ ದೂರು ದಾಖಲಾಗಿದೆ.
ಬಡಗಮಿಜಾರು ಗ್ರಾಮದ ಅಶ್ವತ್ಥಪುರ ನಿವಾಸಿಗಳಾದ ರುಕ್ಕಯ್ಯ ಪೂಜಾರಿ ಮತ್ತು ಪದ್ಮನಾಭ ಪೂಜಾರಿ ಕಳೆದ ಹಲವು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಗ್ರಾಮಸ್ಥರು ಮತ್ತು ಸ್ತ್ರೀ ಶಕ್ತಿ ಸಂಘಟನೆಗಳಿಂದ ಗ್ರಾಮದಲ್ಲಿ ಕಳ್ಳ ಭಟ್ಟಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸುವಂತೆ ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪಂಚಾಯತ್ ಅದ್ಯಕ್ಷರು ಪ್ರಕರಣದ ಬಗ್ಗೆ ಮುಂದಿನ ಕ್ರಮಕ್ಕಾಗಿ ಇದನ್ನು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಗಮನಕ್ಕೆ ತಂದಿದ್ದರು.
ದೂರು ನೀಡಿದ್ದಕ್ಕಾಗಿ ಕೊಟ್ಟಿರುವ ಬಗ್ಗೆ ಆಕ್ರೋಶಗೊಂಡಿರುವ ಅಕ್ರಮ ಮದ್ಯ ಮಾರಾಟ ವ್ಯಾಪಾರಿಗಳು ತನ್ನನ್ನು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ, ಗುಂಪು ಕಟ್ಟಿಕೊಂಡು ಹಲ್ಲೆಗೆ ಯತ್ನಿಸಿದ್ದಾರೆ, ಬೇರೆ ವ್ಯಕ್ತಿಗಳ ಮೂಲಕ ಕೊಲೆಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಾವು ಬಹಿರಂಗವಾಗಿ ಮದ್ಯವನ್ನು ಮಾರಾಟ ಮಾಡುವುದಾಗಿ ಇದಕ್ಕೆ ನೀನೇನು ಮಾಡುತ್ತೀಯಾ ಎಂದು ಸವಾಲು ಹಾಕಿದ್ದಾರೆ ಮತ್ತು ಗ್ರಾಮಸಭೆ ವಾರ್ಡ್ ಸಭೆಗಳಲ್ಲಿ ತಮ್ಮ ವ್ಯಾಪಾರದ ಬಗ್ಗೆ ಮಾತನಾಡಿದರೆ ಜಾಗೃತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಎಂದು ದೂರಿದ್ದಾರೆ.
ಪದ್ಮನಾಭ ಪೂಜಾರಿಯು ತಮ್ಮ ವ್ಯಾಪಾರಕ್ಕೆ ಅಡ್ಡಿ ಮಾಡುತ್ತಿರುವ ಅಧ್ಯಕ್ಷನಿಗೆ ಒಂದು ಗತಿ ಕಾಣಿಸಬೇಕೆಂದು ಕೆಲವರಲ್ಲಿ ತಿಳಿಸಿದ್ದಾನೆಂಬ ಮಾಹಿತಿ ಇದೆ. ತಾನು ಇವರ ಅಕ್ರಮಕ್ಕೆ ಅಡ್ಡಿ ಬಾರದಂತೆ ತನ್ನ ಮೇಲೆ ಹಫ್ತಾ ವಸೂಲಿ ಮತ್ತು ವೈಯಕ್ತಿಕ ವಿಚಾರವನ್ನು ಮುಂದಿಟ್ಟು ಸುಳ್ಳು ದೂರು ನೀಡಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಆದುದರಿಂದ ಪದ್ಮನಾಭ ಪೂಜಾರಿ ಮತ್ತು ರುಕ್ಕಯ್ಯ ಪೂಜಾರಿ ಅವರನ್ನು ವಿಚಾರಣೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಾಲಕೃಷ್ಣ ದೇವಾಡಿಗ ಅವರು ದೂರು ನೀಡಿದ್ದಾರೆ.