ಯಕ್ಷಾಶ್ರಯ ಯೋಜನೆಯಲ್ಲಿ ನೂರು ನಿವೇಶನಗಳ ಸಿದ್ಧತೆ : ಸತೀಶ್ ಪಟ್ಲ
ಮುಂಬಯಿ, ಆ.07: ಕರ್ನಾಟಕದ ಗಂಡುಕಲೆ ಯಕ್ಷಗಾನದ ಉಳಿವು, ಸಂಶೋಧನೆ, ಕಲಾಕಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೂಪುಗೊಂಡ ಈ ಯಕ್ಷಧ್ರುವ ಟ್ರಸ್ಟ್ ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನವನ್ನು ಪ್ರೊತ್ಸಾಹಿಸುವ ಆಶಯದೊಂದಿಗೆ, ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶ ಇರಿಸಿಕೊಂಡಿದೆ. ಕಳೆದ ವರ್ಷವೇ ಸ್ಥಾಪಿತ ಈ ಟ್ರಸ್ಟ್ ವಿಶೇಷವಾಗಿ ಯಕ್ಷಗಾನ ಕಲಾವಿದರ ಪಾಲಿಗೆ ಕಲ್ಪವೃಕ್ಷವಾಗಿಸಲು ಅಲೋಚಿಸಿದ್ದು, ಯಕ್ಷಾಶ್ರಯ ಯೋಜನೆ ಬಡಕಲಾವಿದ ಮನೋಭಾವಕ್ಕೆ ಪುಷ್ಠೀಕರಿಸಿ ಸೂರ್ಯಚಂದ್ರರು ಪ್ರಕಾಶಿಸುತ್ತಿರುವ ವರೇಗೂ ಯಕ್ಷಗಾನ ಉಳಿಸುವ ಭರವಸೆ ತುಂಬಲಿದೆ. ಆದುದರಿಂದ ಅತೀ ಶೀಘ್ರದಲ್ಲೇ ಬಡ ಯಕ್ಷಗಾನ ಕಲಾವಿದರಿಗಾಗಿ ಕನಿಷ್ಠ ನೂರು ನಿವೇಶನಗಳನ್ನು ರೂಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಸರ್ವರ ಸಹಯೋಗ ಅವಶ್ಯಕವಾಗಿದೆ ಎಂದು ಯಕ್ಷಧ್ರುವ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕಟೀಲು ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ನುಡಿದರು.

ಕಳೆದ ಆದಿತ್ಯವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ಕಬೆತಿಗುತ್ತು ಶ್ರೀಮತಿ ಕಾಶಿ ಸಿದ್ಧು ಶೆಟ್ಟಿ ಕಿರು ಸಭಾಗೃಹದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪಟ್ಲಗುತ್ತು ಮಹಾಬಲ ಶೆಟ್ಟಿ ಮಾರ್ಗದರ್ಶನ ದಲ್ಲಿ ಸ್ಥಾಪಿತ ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್‍ನ ಮುಂಬಯಿ ಸಮಿತಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಭೆಯನ್ನುದ್ದೇಶಿಸಿ ಸತೀಶ್ ಪಟ್ಲ ಮಾತನಾಡಿದರು.

Yakshadhruva Patla Foundation-2

Yakshadhruva Patla Foundation-4

Yakshadhruva Patla Foundation-A1

Yakshadhruva Patla Foundation-A2

 

ಹಲವು ಯಕ್ಷಗಾನ ಕಲಾವಿದರ ಬದುಕನ್ನು ಕಂಡಾಗ ಬೇಸರವಾಗುತ್ತದೆ. ಇಂತಹ ಸಂದರ್ರ್ಭದಲ್ಲಿ ಅವರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ಕಳೆದ ವರ್ಷ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಿಸಲಾಗಿದೆ. ಈಗಾಗಲೇ ಅಶಕ್ತ ಕಲಾವಿದರಿಗೆ ಲಕ್ಷಾಂತರ ಮೊತ್ತವನ್ನು ಟ್ರಸ್ಟ್‍ನಿಂದ ನೀಡಲಾಗಿದೆ. ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವೇ ಫೌಂಡೇಶನ್‍ನ ಗುರಿಯಾಗಿದೆ. ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಹುಟ್ಟಿಕೊಂಡ ಈ ಸಂಸ್ಥೆಯು ಕಲಾವಿದರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ. ದುಬೈ ಘಟಕವು ಈಗಾಗಲೇ ಸ್ಥಾಪನೆಗೊಂಡಿದ್ದು, ಮುಂದೆ ಲಂಡನ್, ಅಮೆರಿಕಾ ಇತ್ಯಾದಿ ವಿದೇಶಿ ನೆಲದಲ್ಲೂ ಸಂಸ್ಥೆಯು ಸಕ್ರಿಯವಾಗಲಿದೆ. ಕಲಾವಿದರು ಉಳಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ ಆದ್ದರಿಂದ ಕಲಾವಿದರಿಗೆ ಸಹಕರಿಸುವ ಈ ಸಂಸ್ಥೆಗೆ ಎಲ್ಲರು ಜಾತಿ, ಮತ ಬೇಧಭಾವಗಳನ್ನು ತೊರೆದು ಸಹಕರಿಸಬೇಕು ಎಂದೂ ಪಟ್ಲ ತಿಳಿಸಿದರು.

ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನದಾಸ್ ಶೆಟ್ಟಿ, ಫೌಂಡೇಶನ್‍ನ ಮುಂಬಯಿ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಉಪಾಧ್ಯಕ್ಷ ಐಕಳ ಗಣೇಶ್ ವಿ.ಶೆಟ್ಟಿ ಮತ್ತು ಯಕ್ಷಧ್ರುವ ಫೌಂಡೇಶನ್‍ನ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಪೆರ್ಮುದೆ ವೇದಿಕೆಯಲ್ಲಿ ಅಸೀನರಾಗಿದ್ದರು.

ಪ್ರಭಾಕರ ಶೆಟ್ಟಿ ಮಾತನಾಡಿ ಪಟ್ಲ ಸತೀಶ್ ಶೆಟ್ಟಿ ಅವರ ಯಕ್ಷಾಶ್ರಯ ಯೋಜನೆಗೆ ನಮ್ಮಿಂದಾಗುವ ಎಲ್ಲಾ ರೀತಿಯ ಸಹಕಾರ ದೊರೆಯಲಿದೆ. ಮುಂಬಯಿಯ ಪ್ರತಿಯೊಬ್ಬರು ಈ ಬೃಹತ್ ಯೋಜನೆಗೆ ಸಹಕರಿಸಬೇಕು. ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸಿ-ಬೆಳೆಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

ಯಕ್ಷಗಾನ ಕಲಾವಿದರ ಬಗ್ಗೆ ಅನುಕಂಪ, ಅವರ ಆರೋಗ್ಯ, ಬದುಕಿನ ಬಗ್ಗೆ ಪ್ರತೀಯೋರ್ವ ಕಲಾಭಿಮಾನಿ ಚಿಂತಿಸಬೇಕು. ಈ ನಿಟ್ಟಿನಲ್ಲಿ ಓರ್ವ ಕಲಾವಿದನಾಗಿದ್ದುಕೊಂಡು ಕಲಾವಿದರ ಕಷ್ಟ-ಕಾರ್ಪಣ್ಯಗಳನ್ನು ಸಮೀಪದಿಂದ ಬಲ್ಲ ಪಟ್ಲ ಸತೀಶ್ ಸ್ಥಾಪಿಸಿದ ಈ ಸಂಸ್ಥೆಗೆ ಮುಂಬಯಿಯ ಎಲ್ಲ ದಾನಿಗಳು ಕೈಜೋಡಿಸಬೇಕು. ಬರೇ ಸಾಂಸ್ಕೃತಿಕವಾಗಿ ಮಾತ್ರವಲ್ಲ ಧಾರ್ಮಿಕ ನಂಬಿಕೆಯಾಗಿಯೂ ಬೆಳೆದ ಈ ಕಲೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆಯಿಂದ ಶತಮಾನಗಳ ಕಾಲ ಉಳಿಯಬೇಕು. ಆದುದರಿಂದ ಕಲಾವಿದರಲ್ಲಿ ಕರುಣೆ, ಅವರ ಆರೋಗ್ಯ, ಬದುಕಿನ ಬಗ್ಗೆ ಪ್ರತೀಯೋರ್ವ ಕಲಾಭಿಮಾನಿ ಚಿಂತಿಸಬೇಕು. ನೂರು ನಿವೇಶನಗಳ ಚಿಂತನೆ ಇದೊಂದು ಬಹುದೊಡ್ಡ ಸಾಧನೆ ಮತ್ತು ಕ್ರಾಂತಿಯೂ ಹೌದು. ಪಟ್ಲರಂತಹ ಯುವ ಕಲಾವಿದರ ಕಾಳಜಿ ಸ್ತುತ್ಯರ್ಹ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಕರ್ನಿರೆ ವಿಶ್ವನಾಥ ಶೆಟ್ಟಿ ತಿಳಿಸಿದರು.

ಮುಂಬಯಿ ಸಮಿತಿಯ ಕಳೆದ ನವೆಂಬರ್‍ನಲ್ಲಿ ಅಭೂತಪೂರ್ವ ಕಾರ್ಯಕ್ರಮವನ್ನು ನಡೆಸಿ ಯಶಸ್ವಿಯಾಗಿದೆ. ಯಕ್ಷಾಶ್ರಯ ಯೋಜನೆಗೆ ಮುಂಬಯಿ ಸಮಿತಿಯಿಂದ ಸಂಪೂರ್ಣ ಸಹಕಾರದ ಅಗತ್ಯವಿದ್ದು, ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಮನೆಯಿಲ್ಲದ ಕಲಾವಿದರುಗಳಿಗೆ ಮನೆ ನಿರ್ಮಿಸುವ ಈ ಬೃಹತ್ ಯೋಜನೆಗೆ ಮುಂಬಯಿಯ ಎಲ್ಲಾ ದಾನಿಗಳ ಸಹಕಾರವನ್ನು ಸಮಿತಿಯು ಬಯಸುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಕನಸು ಶೀಘ್ರದಲ್ಲಿ ನನಸುಗೊಳ್ಳಲಿ ಎಂದು ಅಶೋಕ್ ಶೆಟ್ಟಿ ಪೆರ್ಮುದೆ ಹಾರೈಸಿದರು.

ದೇಶವಿದೇಶಗಳಲ್ಲಿ ಹೆಸರುವಾಸಿ ಆಗಿರುವ ಪಟ್ಲ ಸತೀಶ್ ಶೆಟ್ಟಿ ಅವರ ಯಕ್ಷಾಶ್ರಯದ ಕನಸು ಈಡೇರಿಸುವಲ್ಲಿ ಕಲಾಭಿಮಾನಿಗಳು ಮುಂದಾಗಬೇಕು. ಮುಂಬಯಿ ಸಮಿತಿಯನ್ನು ಸಕ್ರಿಯವಾಗಿಸಿಕೊಂಡು ಈ ಬೃಹತ್ ಯೋಜನೆಗೆ ದಾನಿಗಳನ್ನು ಸಂಪರ್ಕಿಸಿ ಸಹಕರಿಸೋಣ ಎಂದು ಪದ್ಮನಾಭ ಪಯ್ಯಡೆ ತಿಳಿಸಿದರು.

ಸಭೆಯಲ್ಲಿ ಫೌಂಡೇಶನ್‍ನ ಮುಂಬಯಿ ಸಮಿತಿಯ ದಿವಾಕರ್ ಶೆಟ್ಟಿ ಇಂದ್ರಾಳಿ, ರಂವೀಂದ್ರನಾಥ್ ಭಂಡಾರಿ, ಪ್ರಕಾಶ್ ಟಿ.ಶೆಟ್ಟಿ ನಲ್ಯಗುತ್ತು, ಶಿವರಾಮ ಜಿ.ಶೆಟ್ಟಿ, ಅರುಣ್ ಎರ್ಮಾಳ್, ವಸಂತ ಶೆಟ್ಟಿ ಪಲಿಮಾರು, ಅಜೆಕಾರು ಬಾಲಕೃಷ್ಣ ಶೆಟ್ಟಿ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಸೇರಿದಂತೆ ಹಲವು ಕಲಾವಿದರು, ಕಲಾ ಸಂಘಟಕರು ಹಾಜರಿದ್ದು, ಗೌ| ಕಾರ್ಯದರ್ಶಿ ಅಶೋಕ್ ಪಕ್ಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *