ಮೂಡುಬಿದಿರೆ: ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಪಡುಬಿದ್ರಿ ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.ಅಶ್ವತ್ಥಪುರ ಯಕ್ಷಚೈತನ್ಯ 12ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಭಾರತೀಯ ಸಂಸ್ಕೃತಿ, ಪುರಾಣಗಳ ಪರಿಚಯ ಯಕ್ಷಗಾನದ ಮೂಲಕ ಸಾಧ್ಯ. ಆದ್ದರಿಂದ ಈ ಕಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಅದಾನಿ ಯುಪಿಸಿಎಲ್ ಸಂಸ್ಥೆ ಯಕ್ಷಗಾನ, ಸಂಗೀತ ಇತ್ಯಾದಿ ಲಲಿತಕಲೆಗಳ ಪ್ರೋತ್ಸಾಹಕ್ಕೆ ಅಗತ್ಯ ನೆರವು ನೀಡುವುದರ ಜೊತೆಗೆ ಅವುಗಳ ಪ್ರಚಾರಕ್ಕೂ ಕಾರ್ಯಕ್ರಮ ರೂಪಿಸಲಿದೆ ಎಂದರು. ಅಶ್ವತ್ಥಪುರ ಯಕ್ಷಚೈತನ್ಯ ಸಂಸ್ಥೆ ಯಕ್ಷಗಾನ ಕಲೆಯ ಪ್ರೋತ್ಸಾಹದ ಜೊತೆಗೆ ಯಕ್ಷಕಲಾವಿದರ ಅಭಿವೃದ್ಧಿ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗೂ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಕೃಷಿ ವಿ. ವಿ. ಸಹಪ್ರಾಧ್ಯಾಪಕ ಡಾ.ಪಿ. ಎಸ್. ಶಂಕರಮೂರ್ತಿ, ಭಾರತೀಯ ಕಲೆ ಸಂಸ್ಕøತಿಯ ಪರಿಚಯದ ಜೊತೆಗೆ ಭಾಷಾಭಿವೃದ್ಧಿಗೂ ಯಕ್ಷಗಾನ ಪೂರಕ ಎಂದರು.ಯಕ್ಷಗಾನ ಪೋಷಕ ಸುದರ್ಶನ ಎಂ. ಮೂಡುಬಿದಿರೆ, ಉದ್ಯಮಿ ಶಕ್ತಿಪ್ರಸಾದ ಶೆಟ್ಟಿ ತೋಡಾರು ಶುಭ ಹಾರೈಸಿದರು. ಸಂಸ್ಥೆ ಗೌರವಾಧ್ಯಕ್ಷ ಕೆ. ಪ್ರಭಾಕರ ಭಟ್, ಉಪಾಧ್ಯಕ್ಷರಾದ ಎಂ. ಕೆ. ಹರಿಶ್ಚಂದ್ರ ರಾವ್, ನಾಗೇಶ ರಾವ್ ಹಂಡೇಲು ವೇದಿಕೆಯಲ್ಲಿದ್ದರು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರರಾವ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಎಂ. ಜೆ. ರಾವ್ ಅಭಿನಂದನ ಭಾಷಣ ಮಾಡಿದರು. ಉಜಿರೆ ಯಕ್ಷಗಾನ ಕಲಾವಿದ ಜನಾರ್ದನ ಆಚಾರ್ಯ ಅವರಿಗೆ ಯಕ್ಷನಿಧಿ ಸಮರ್ಪಣೆ ಮಾಡಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿ ಅನೂಪ್ ಎ. ರಾವ್ ಅರೆಮಜಲು ಮಂಗಳೂರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಸ್ಥೆ ಅಧ್ಯಕ್ಷ ಕಟೀಲು ಕೃಷ್ಣಮೂರ್ತಿ ಸ್ವಾಗತಿಸಿದರು. ಕಾರ್ಯದರ್ಶಿ ಮಾಯಣ ಕೃಷ್ಣಮೂರ್ತಿ ವರದಿ ವಾಚಿಸಿದರು. ಸಂಚಾಲಕ ಸದಾಶಿವ ರಾವ್ ನೆಲ್ಲಿಮಾರು ವಂದಿಸಿದರು. ಕಿರಣ್ ಮಂಜನಬೈಲು ಸನ್ಮಾನಪತ್ರ ವಾಚಿಸಿದರು. ವಿಶ್ರಾಂತ ಮುಖ್ಯೋಪಾಧ್ಯಾಯ ಪಯ್ಯಾಡಿ ಶ್ಯಾಮಸುಂದರ ರಾವ್ ಮತ್ತು ಸುರೇಂದ್ರ ಬಡಗಾಬೆಟ್ಟು ನಿರೂಪಿಸಿದರು. ಮಣೀಂದ್ರ ಕೋಟೆಬಾಗಿಲು ಮತ್ತು ಚೈತನ್ಯ ಮಂಗೇಬೆಟ್ಟು ಸಹಕರಿಸಿದರು.ಸಭಾ ಕಾರ್ಯಕ್ರಮಕ್ಕೆ ಎಂ. ಆರ್. ವಾಸುದೇವ ಸಾಮಗ ನೇತೃತ್ವದ ಮುನ್ನ `ಸಂಯಮಂ’ ಕಲಾವಿದರಿಂದ `ಬಿಲ್ಲಹಬ್ಬ’ ತಾಳಮದ್ದಳೆ, ಬಳಿಕ ನುರಿತ ಕಲಾವಿದರಿಂದ `ಶಲ್ಯಪರ್ವ’ ತಾಳಮದ್ದಳೆ ಹಾಗೂ `ಶೂರ್ಪನಖಾ ಮಾನಭಂಗ’ ಮತ್ತು `ಇಂದ್ರಜಿತು ಕಾಳಗ’ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.