ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣಕ್ಕೆ ಸುಮಾರು 20 ಮಂದಿ ವಿದ್ಯಾರ್ಥಿಗಳು ವರ್ಲಿಚಿತ್ರಗಳನ್ನು ಬಿಡಿಸುವ ಮೂಲಕ ಸಾರ್ವಜನಿಕರ ಗಮನಸೆಳೆದರು.
ಜೇಸಿಐ ಸಪ್ತಾಹದ ಅಂಗವಾಗಿ ಮೂಡುಬಿದಿರೆಯಲ್ಲಿ ಜೇಸಿಐ ಮೂಡುಬಿದಿರೆ ತ್ರಿಭುವನ್ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಮಂಗಳವಾರ `ಕಲರ್ಸ್ ದ ವಾಲ್ಸ್- ಇನ್ಸ್ಪೈರ್ ದ ಮೈಂಡ್’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ 20 ಮಂದಿ ವಿದ್ಯಾರ್ಥಿಗಳು ಕಲಾವಿದ ಭರತ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ವರ್ಲಿಚಿತ್ರಗಳನ್ನು ಬಿಡಿಸಿದರು. ಜನಪದ ಮಾತ್ರವಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬರಹಗಳನ್ನು ಆವರಣ ಗೋಡೆಗಳಲ್ಲಿ ಬರೆಯಲಾಯಿತು.


ಮೂಡುಬಿದಿರೆ ಪುರಸಭಾ ಅಧ್ಯಕ್ಷ ರೂಪಾ ಸಂತೋಷ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೂಡುಬಿದಿರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲ, ಪುರಸಭೆಯ ಪರಿಸರ ಅಧಿಕಾರಿ ಶಿಲ್ಪಾ, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್, ಜೇಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್, ಕಾರ್ಯದರ್ಶಿ ಪ್ರಜ್ವಲ್, ಕೋಶಾಧಿಕಾರಿ ಅಬ್ದುಲ್ ಹಮೀದ್, ಸ್ಥಾಪಕಾಧ್ಯಕ್ಷ ಜಾನ್ ಪಿಂಟೋ, ನಿಕಟಪೂರ್ವ ಅಧ್ಯಕ್ಷ ದೀರೇಂದ್ರ, ಸದಸ್ಯರಾದ ಸಂತೋಷ್ ಕುಮಾರ್, ವಿನಯಚಂದ್ರ, ಚಂದ್ರಹಾಸ ದೇವಾಡಿಗ ಉಪಸ್ಥಿತರಿದ್ದರು.

