ಮೂಡುಬಿದಿರೆ: ಮಂಗಳೂರು ವಿವಿ ಅಂತರ್‍ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಮಹಿಳೆಯರ ಹಾಗು ಪುರುಷರ ಎರಡು ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ನಾಗಿ ಮೂಡಿಬಂದಿದೆ. ಎರಡು ವಿಭಾಗದಲ್ಲಿ ಸತತ 13ನೇ ವರ್ಷದಿಂದ ಅಳ್ವಾಸ್ ತಂಡ ಈ ಸಾಧನೆಯನ್ನು ತನ್ನಲ್ಲೆ ಉಳಿಸಿಕೊಂಡು ದಾಖಲೆ ನಿರ್ಮಿಸಿದೆ. ಆಳ್ವಾಸ್‍ನ ಪುರುಷರ ತಂಡ ಚಾಂಪಿಯನ್‍ಶಿಪ್ ಗೆಲ್ಲುವ ಮೂಲಕ ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ಪರ್ಯಾಯ ಫಲಕವನ್ನು ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್‍ಗಾಗಿ ಕೈಕುರಿ ರಾಮಣ್ಣ ಗೌಡ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಉಜಿರೆ ಎಸ್‍ಡಿಎಂ ತಂಡ ರನ್ನರ್‍ಅಪ್ ಮತ್ತು ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ತಂಡ ತೃತೀಯ ಸ್ಥಾನ ಪಡಕೊಂಡಿತು. ಮಹಿಳೆಯರ ವಿಭಾಗದಲ್ಲಿ ಉಜಿರೆ ಎಸ್‍ಡಿಎಂ ತಂಡ ರನ್ನರ್‍ಅಪ್ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಸ್ಥಾನ ಪಡೆಯಿತು. ಪುರುಷರ ವೈಯುಕ್ತಿಕ ವಿಭಾಗದಲ್ಲಿ ಆಳ್ವಾಸ್‍ನ ಕುಂಭಾರ್ ಕಂಟಿಲಾಲ್ ದೇವರಾಮ್, ರಂಜಿತ್ ಕುಮಾರ್ ಪಾಟಿಲ್ ಮತ್ತು ರಾಬಿನ್ ಸಿಂಗ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‍ನ ಚೌಹಾನ್ ಜ್ಯೋತಿ ಜಗ್‍ಬಹುದ್ದೂರ್, ಗವಾಲಿ ಯೋಗಿತ ಗುಲಾಬ್ ಹಾಗೂ ಸಿಂಗ್ ರಿಶು ದಲಿಸ್ನಗರ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗೆದ್ದುಕೊಂಡರು. ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಿತು. ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಅಭಯಚಂದ್ರ ಜೈನ್ ವಿಜೇತರಿಗೆ ಬಹುಮಾನ ವಿತರಿಸಿದರು.

ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ, ಜಿಲ್ಲಾ ಅಥ್ಲೆಟಿಕ್ ತರಬೇತುದಾರ ದಾಮೋದರ ಗೌಡ ಉಪಸ್ಥಿತರಿದ್ದರು. ಯುವಸಬಲೀಕರಣ ಇಲಾಖೆಯ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಆಳ್ವಾಸ್ ಸಿಪಿಎಡ್ ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಉಪಸ್ಥಿತರಿದ್ದರು.