ಬಂಟ್ವಾಳ: ಗ್ರಾಹಕರನ್ನು ದೇವರಂತೆ ಕಂಡು ಉತ್ತಮ ಸೇವೆ ನೀಡುವ ಸಹಕಾರಿ ಸಂಘಗಳು ಉನ್ನತ ಮಟ್ಟಕ್ಕೆ ಏರಿ ಇತಿಹಾಸ ನಿರ್ಮಿಸಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು.

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಬಿ.ಸಿ.ರೋಡ್ ಕೈಕಂಬ ಪೊಳಲಿ ಕ್ರಾಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ಶಿಲನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಯಾವುದೇ ಒಂದು ಸಂಘ-ಸಂಸ್ಥೆ ಉನ್ನತ ಮಟ್ಟಕ್ಕೆ ಏರಬೇಕಾದರೆ ಮತ್ತು ಸಾರ್ವಜನಿಕರ ಸೇವೆ ಮಾಡಲು ಆ ಸಂಘ-ಸಂಸ್ಥೆಗೆ ಸ್ವಂತ ಕಟ್ಟಡ ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಸ್ವಂತ ನಿವೇಶನದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಮುಂದಾಗಿರುವುದು ಶಾಘ್ಲಾನೀಯವಾಗಿದೆ ಎಂದು ಹೇಳಿದ ಅವರು, ತಾವು ಕೆಲಸ ಮಾಡುವ ಸಂಸ್ಥೆಯ ಮೇಲೆ ಪ್ರೀತಿ ಇಟ್ಟು ಸೇವಾ ಮನೋಭಾವದಿಂದ ನೌಕರರು ಕೆಲಸ ನಿರ್ವಹಿಸಿದಾಗ ಆ ಸಂಘ-ಸಂಸ್ಥೆ ಅಭಿವೃದ್ಧಿ ಕಾಣಲು ಸಾಧ್ಯ. ನೌಕರರೊಂದಿಗೆ ಉತ್ತಮ ಸಂಬಂಧ ಹೊಂದಿ ಅವರಿಗೆ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಲು ಬೇಕಾದ ವ್ಯವಸ್ಥೆ ಕಲ್ಪಿಸುವುದು ಸಂಘ-ಸಂಸ್ಥೆಗಳ ಜವಾಬ್ದಾರಿ ಕೂಡಾ ಆಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಸಹಕಾರಿ ಸೇವೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿದೆ. ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದ ನೀಲ ನಕ್ಷೆಯು ಒಂದು ಸಹಕಾರಿ ಸಂಘದ ಕಚೇರಿಯಂತೆ ಇರದೆ ಕಾರ್ಪೊರೇಟ್ ಕಚೇರಿಯಂತಿದೆ. ಸಂಘದಕ್ಕೆ ಬರುವ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ನೂತನ ಕಟ್ಟಡಕ್ಕೆ ಬೇಕಾದ ಹವಾನಿಯಂತ್ರನಗಳನ್ನು ನಮ್ಮಿಂದಲೇ ಒದಗಿಸಲಾಗುವುದು ಎಂದು ಭರವಸೆ ನೀಡಿದ ಅವರು 40 ವರ್ಷ ಇತಿಹಾಸ ಇರುವ ಈ ಸಂಘವು ಇನ್ನಷ್ಟು ಉತ್ತನ ಮಟ್ಟಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಸದಸ್ಯ ಸದಾಶಿವ ಬಂಗೇರ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಸಂಘ ನಡೆದು ಬಂದ ದಾರಿ ಬಗ್ಗೆ ವರದಿ ವಾಚಿಸಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಬಿ.ಜೆ.ಪಿ.ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಪುರಸಭೆ ಸದಸ್ಯ ಗೋವಿಂದ ಪ್ರಭು, ಸಂಘದ ನಿರ್ದೇಶಕರು ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜಿ.ಆನಂದ್ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಮಹಾಬಲ ಶೆಟ್ಟಿ ವಂದಿಸಿದರು. ಪತ್ರಕರ್ತ ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.