ಬಂಟ್ವಾಳ: ಆಧುನಿಕ ಇತಿಹಾಸ ನಿರೂಪಣಾ ಕ್ರಮವು ಪಾರಂಪರಿಕ ಮಾದರಿಯ ಇತಿಹಾಸ ಬರವಣಿಗೆಗಳಿಗಿಂತ ಭಿನ್ನವಾಗಿದೆ. ಲಿಖಿತ ಆಕರಗಳ ಜೊತೆಗೆ ಮೌಖಿಕ ಆಕರಗಳೂ ಸ್ಥಾನ ಪಡೆದುಕೊಂಡಿದೆ. ಪ್ರಧಾನಧಾರೆಯ ಇತಿಹಾಸ ನಿರೂಪಣೆಗಳು ಅಧಿಕಾರ ಕೇಂದ್ರಗಳನ್ನೆ ಆಶ್ರಯಿಸಿರುವುದು ಹೆಚ್ಚು. ಆದರೆ ಬಹು ಜನರ, ಶ್ರಮಿಕವರ್ಗದ, ಅಂಚಿನ ಇತಿಹಾಸವು ಅಕ್ಷರ ಮಾಧ್ಯಮದ ಪ್ರಧಾನ ಇತಿಹಾಸಕ್ರಮದ ಒಳಗೆ ಸ್ಥಾನ ಪಡೆಯದೇ ಹೋಯಿತು. ಹಾಗಾಗಿ ಪಾರ್ಶ್ವಿಕವಾದ ಇತಿಹಾಸ ಮಾತ್ರ ಇತಿಹಾಸವೆಂದು ಕರೆಸಿಕೊಂಡಿತು. ಕೆಳಸ್ತರದ(ಸಭಾಲ್ಟ್ರನ್) ಇತಿಹಾಸವು ಪ್ರಧಾನವಾಗಿ ಬೌತಿಕ ಹಾಗೂ ಮೌಖಿಕ ಆಕರಗಳನ್ನೇ ಆಶ್ರಯಿಸಬೇಕಾಗುತ್ತದೆ.

ಸಮುದಾಯಗಳು ಜೀವನ ನಿರ್ವಹಣೆಯ ಕಾರಣಕ್ಕಾಗಿ ಕಾಲ, ದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ತಾಂತ್ರಿಕ ಸ್ವರೂಪದ ವಸ್ತುಗಳನ್ನು ಬಳಸುತ್ತಿದ್ದವು. ನಾಗರಿಕತೆ ಬೆಳೆದುಕೊಂಡು ಬಂದಂತೆ ತಾನು ಬಳಸಿದ ಪರಿಕರಗಳಲ್ಲೂ ಪರಿಷ್ಕಾರವನ್ನು ಮಾಡಿಕೊಂಡದ್ದನ್ನು ಕಾಣಬಹುದು. ಕೃಷಿ, ಬೇಸಾಯವನ್ನೇ ಆಶ್ರಯಿಸಿದ್ದ ಸಮುದಾಯಗಳ ಇತಿಹಾಸವು ಭೌತಿಕ ವಸ್ತುಗಳಲ್ಲಿ, ಹಾಡು, ಕುಣಿತ, ಜನಪದ ಕತೆ, ನಂಬಿಕೆಗಳಲ್ಲಿ ಅಡಕವಾಗಿರುತ್ತದೆ. ಇವೇ ಮೊದಲಾದ ಆಕರಗಳ ಮೂಲಕ ಪುನರ್ ರಚಿಸಿಕೊಳ್ಳುವ ಇತಿಹಾಸವು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಇತಿಹಾಸದ ಪುನರ್ ರಚನೆಯ ಅಧ್ಯಯನದ ಸಂದರ್ಭದಲ್ಲಿ ಎದುರಾಗುವ ಸಂದಿಗ್ದ, ಆತಂಕ, ತೊಡಕುಗಳನ್ನು ಸಂಶೋದಕರು ಸಮಸ್ಯೀಕರಿಕೊಳ್ಳಬೇಕಾದ ವಿಧಾನ ಕುರಿತು ಚರ್ಚಿಸುವ ಅಗತ್ಯತೆ ಇದೆ. ಕರ್ನಾಟಕದ ಸಂದರ್ಭದಲ್ಲಿ ಭೌತಿಕ ವಸ್ತುಗಳನ್ನು ಕುರಿತ ತಾತ್ವಿಕ ಚರ್ಚೆಗಳು ನಡೆದದ್ದು ವಿರಳ. ಹಾಗಾಗಿ ಕಾಲ, ಸಂದರ್ಭ, ವರ್ಗ ಇದರ ತಿರ್ಮಾನಕ್ಕೆ ಬಳಸುವ ಮಾನದಂಡಗಳ ಬಗ್ಗೆ ಚರ್ಚೆ, ಈ ಮಾನದಂಡಗಳನ್ನು ಡೊಮಿನೆಂಟ್ ಹಿಸ್ಟೊರಿಯೊಗ್ರಾಫಿ ಯ ಮಾನದಂಡಗಳಿಂದಲೆ ತಿರ್ಮಾನಿಸಬಹುದೇ? ಒಂದು ವೇಳೆ ಪ್ರತ್ಯೇಕ ಮಾನದಂಡಗಳನ್ನು ರೂಪಿಸಬೇಕಾದರೆ ಅವು ಯಾವುವು? ಈ ಬಗೆಯ ಚರ್ಚೆಯನ್ನು “ಭೌತಿಕ ವಸ್ತು ಪರಿಕರಗಳು- ಇತಿಹಾಸದ ಪುನರ್ ರಚನೆ” ಎನ್ನುವ ವಿಚಾರ ಕಮ್ಮಟದಲ್ಲಿ ನಡೆಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

“ಭೌತಿಕ ವಸ್ತು ಪರಿಕರಗಳು- ಇತಿಹಾಸದ ಪುನರ್ ರಚನೆ” ವಿಚಾರ ಕಮ್ಮಟವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ವಿವೇಕ ರೈಯವರು ಉದ್ಘಾಟಿಸಿ ದಿಕ್ಸೂಚಿ ನೀಡಲಿರುವರು. ಕುವೆಂಪು ವಿ.ವಿಯ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗದ ಪ್ರೊ.ರಾಜಾರಾಮ ಹೆಗಡೆ ಡಾ. ಆಶಾಲತಾ ಸುವರ್ಣ ಬರೆದ ಕೃತಿ “ ದಿ ಗ್ರಾನೆರಿ ಆಫ್ ತುಳು ಹೆರಿಟೇಜ್”ಯನ್ನು ಬಿಡುಗಡೆಗೊಳಿಸಲಿಕ್ಕಿದ್ದಾರೆ. ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮಿನಾರಾಯಣ ಆಳ್ವ ವಹಿಸಲಿಕ್ಕಿದ್ದಾರೆ. ಆ ನಂತರ ನಡೆಯಲಿಕ್ಕಿರುವ ಮೊದಲ ಗೋಷ್ಟಿಯಲ್ಲಿ ಡಾ. ರಾಜಾರಾಮ ಹೆಗಡೆ ತುಳುನಾಡಿನ ಭೌತಿಕ ವಸ್ತುಗಳು ಮತ್ತು ಇತಿಹಾಸ ತಾತ್ವಿಕತೆ ಕುರಿತಂತೆ ವಿಚಾರ ಮಂಡನೆ ಮಾಡಲಿಕ್ಕಿದ್ದಾರೆ.

ಅವರೊಂದಿಗೆ ಸಂವಾದದಲ್ಲಿ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಪುರಾತತ್ವ ಮತ್ತು ಇತಿಹಾಸ ಹಾಗೂ ಡಾ. ಪ್ರಕಾಶ್ಚಂದ್ರ ಶಿಶಿಲ ಗೃಹ ಬಳಕೆಯ ವಸ್ತುಗಳು ಮತ್ತು ಇತಿಹಾಸದ ಕುರಿತಾಗಿ ವಿಚಾರ ಮಂಡನೆ ಮಾಡಲಿಕ್ಕಿದ್ದಾರೆ. ಗೋಷ್ಠಿ 2 ರಲ್ಲಿ ಬೆಂಗಳೂರಿನ ಜಾನಪದ ಲೋಕದ ಡಾ. ಕುರುವ ಬಸವರಾಜ್ ಅವರು ಜಾನಪದ ಮತ್ತು ಭೌತಿಕ ವಸ್ತುಗಳು ಎಂಬ ಕುರಿತಾಗಿ ವಿಚಾರ ಮಂಡಿಸಲಿಕ್ಕಿದ್ದಾರೆ. ಅವರೊಂದಿಗೆ ತುಳುನಾಡಿನ ಕೃಷಿ ಭೌತಿಕ ವಸ್ತು ಜನಪದವನ್ನು ಅನುಲಕ್ಷಿಸಿ ಡಾ. ಚಂದ್ರಶೇಖರ ದಾಮ್ಲೆ ಮತ್ತು ಭೌತಿಕ ಸಂಸ್ಕೃತಿ ಮತ್ತು ಆರಾಧನೆ ಬಗ್ಗೆ ಪ್ರೊ. ಸುರೇಶ ರೈ ಮಂಡನೆ ಮಾಡಲಿಕ್ಕಿದ್ದಾರೆ.

ಗೋಷ್ಠಿ 3 ರಲ್ಲಿ ವಸ್ತು ಸಂಗ್ರಹಾಲಯ ಮತ್ತು ಭೌತಿಕ ವಸ್ತುಗಳು ಕುರಿತಾಗಿ ಡಾ. ಟಿಕೆ ರವೀಂದ್ರನ್, ತುಳುನಾಡಿನ ಜನಪದ ಸಾಹಿತ್ಯದ ಕುರಿತಂತೆ ಪ್ರೊ.ಕೃಷ್ಣಮೂರ್ತಿ, ತುಳುನಾಡಿನ ಆಚರಣೆಗಳು ಬಗ್ಗೆ ಡಾ. ಪೂವಪ್ಪ ಕಣಿಯೂರು, ಕರಕುಶಲ ವಸ್ತುಗಳಲ್ಲಿ ಐತಿಹಾಸಿಕ ಅಂಶಗಳು ಕುರಿತಾಗಿ ಡಾ. ಸಾಯಿಗೀತಾ ಮತ್ತು ಚೇತನ ಮುಂಡಾಜೆ ಸಮನ್ವಯಕಾರರಾಗಿ ಈ ಗೋಷ್ಠಿಯನ್ನು ನಿರ್ವಹಿಸಲಿಕ್ಕಿದ್ದಾರೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಅ.12 ರಂದು ಸಂಚಯಗಿರಿಯಲ್ಲಿರುವ ಕೇಂದ್ರದ ಸಭಾಭವನದಲ್ಲಿ ನಡೆಯುವ ಈ ವಿಚಾರ ಕಮ್ಮಟ ಇತಿಹಾಸದ ದೃಷ್ಟಿಕೋನದಲ್ಲಿ ಒಂದು ಹೊಸ ಮೈಲಿಗಲ್ಲಾಗಲಿದೆ.

By suddi9

Leave a Reply

Your email address will not be published. Required fields are marked *