ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯ ವೃತ್ತದ ಬಳಿ ಪರಿಸರ ಇಲಾಖೆಯ ನಿರ್ಮಲ ಬಂಟ್ವಾಳ ಯೋಜನೆಯಡಿ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಜೋಡುಮಾರ್ಗ ಉದ್ಯಾನವನ’ವನ್ನು ರವಿವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು.



ಬಳಿಕ ಉದ್ಯಾನವನದಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಐವನ್ ಡಿಸೋಜ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ರೋಡ್ರೀಗಸ್ ಸೇರಿದಂತೆ ಜಿಪಂ, ತಾಪಂ ಹಾಗೂ ಪುರಸಭಾ ಸದಸ್ಯರು ಸಹಿತ ಪ್ರಮುಖರೊಂದಿಗೆ ಅರ್ಧ ಸುತ್ತು ವಿಹಾರ ನಡೆಸಿ ಉದ್ಯಾನವನದ ಸೊಬಗನ್ನು ವೀಕ್ಷಿಸಿದರು.



ಕೇವಲ ಐದು ನಿಮಿಷಗಳಲ್ಲೇ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ರಿಬ್ಬನ್ ಕತ್ತರಿಸಿ ಉದ್ಘಾಟನೆಗೈದ ಬಳಿಕ ನಾಮ ಫಲಕ ಅನಾವರಣಗೊಳಿಸಿದ ಮುಖ್ಯಮಂತ್ರಿಯವರು ವಿಹಾರ ನಡೆಸಿ ನೆರೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೈಬೀಸಿ ಉಪ್ಪಿನಂಗಡಿಯತ್ತ ತೆರಳಿದರು. ಉದ್ಯಾನವನದ ಉದ್ಘಾಟನೆಯ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಲಿಲ್ಲ. ಉದ್ಯಾನವನದ ವೇದಿಕೆಯಲ್ಲಿ ರಸ ಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಂಡೆ, ಕೊಂಬು, ಕಹಳೆಯೊಂದಿಗೆ ಮುಖ್ಯಮಂತ್ರಿಯವರನ್ನು ಉದ್ಯಾನವನದ ಬಳಿ ಸ್ವಾಗತಿಸಲಾಯಿತು. ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಜೊತೆ ಫೋಟೋದಲ್ಲಿ ಕಾಣಿಸಿಕೊಳ್ಳಲು ನೂಕು ನುಗ್ಗಲು ನಡೆಯಿತು. ಜನರನ್ನು ಬದಿಗೆ ಸರಿಸಲು ಪೊಲೀಸರು ಹರಸಾಹಸ ಪಟ್ಟರು. ಜಿಲ್ಲಾಧಿಕಾರಿ, ಐಜಿಪಿ, ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಸ್ಥಳೀಯ ಜನಪ್ರತಿನಿಧಿಗಳಾಗಲೀ ಯಾರೊಬ್ಬರು ಕೂಡಾ ಭಾಗವಹಿಸಲಿಲ್ಲ.
