ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತ ಬಳಿ ಈಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಭಾನುವಾರ ಮಧ್ಯಾಹ್ನ ಉದ್ಘಾಟಿಸಿದ ರೂ 1.40ಕೋಟಿ ವೆಚ್ಚದ ಟ್ರೀ ಪಾರ್ಕ್ನಲ್ಲಿ ಕಳೆದ ಎರಡು ದಿನಗಳಲ್ಲಿ ಸಂಜೆ ವೇಳೆಗೆ ಭಾರೀ ಜನಸಂದಣಿ ಕಂಡು ಬಂದಿದ್ದು, ಮಕ್ಕಳ ಕಲರವ ಜೊತೆಗೆ ಮೊಬೈಲ್ ಛಾಯಾಚಿತ್ರ ಕ್ಲಿಕ್ಕಿಸುವ ಭರದಲ್ಲಿ ಇಲ್ಲಿನ ಕೆಲವೊಂದು ಕಲಾಕೃತಿ ಮತ್ತು ಹೂಗಿಡಗಳು ಹಾನಿಗೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ‘ನಿರ್ಮಲ ಬಂಟ್ವಾಳ ಯೋಜನೆ’ಯಡಿ ಉತ್ಸುಕತೆ ವಹಿಸಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬಂಟ್ವಾಳ ಪುರಸಭೆ ವತಿಯಿಂದ ಮಂಗಳೂರು ಪ್ರಮೋದ್ ನರ್ಸರಿ ಸಂಸ್ಥೆ ಮೂಲಕ ಆಕರ್ಷಕ ಟ್ರೀ ಪಾರ್ಕ್ ನಿರ್ಮಿಸಿದ್ದರು. ಇದಕ್ಕಾಗಿ ಪುರಸಭೆ ವತಿಯಿಂದಲೂ ವಿವಿಧ ಮೂಲಭೂತ ಸೌಕರ್ಯಕ್ಕಾಗಿ ಗರಿಷ್ಟ ಮೊತ್ತದ ಅನುದಾನ ವಿನಿಯೋಗಿಸಿದೆ. ಈ ಹಿಂದೆ ಪುರಸಭೆ ಕಸ ವಿಲೇವಾರಿ ಮತ್ತು ತ್ಯಾಜ್ಯ ಡಂಪಿಂಗ್ ಯಾರ್ಡ್ ಆಗಿ ಉಪಯೋಗಿಸಿ ದುರ್ನಾತ ಬೀರುತ್ತಿದ್ದ ಈ ಪ್ರದೇಶದಲ್ಲಿ ಸುಸಜ್ಜಿತ ಟ್ರೀ ಪಾರ್ಕ್ ನಿರ್ಮಿಸಿ ಸಚಿವ ರೈ ಅವರು ನಾಗರಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದೀಗ ಟ್ರೀ ಪಾರ್ಕ್ ಪ್ರವೇಶಕ್ಕೆ ನಿಗದಿತ ದರ ವಸೂಲಿ ಸಹಿತ ಇದರ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಯಾರಿಗೂ ವಹಿಸಿಕೊಡದಿರುವ ಪರಿಣಾಮ ಸ್ವತಃ ಪ್ರಮೋದ್ ನರ್ಸರಿ ಸಂಸ್ಥೆ ಕೆಲವೊಂದು ಸಿಬ್ಬಂದಿ ಮಾತ್ರ ಇದ್ದಾರೆ. 
ಹಾನಿ ಆರೋಪ:
ಈ ನಡುವೆ ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಇಲ್ಲಿ ಭಾರೀ ಜನಸಂದಣಿ ಮತ್ತು ಮಕ್ಕಳ ಕಲರವ ಕೇಳಿ ಬರುತ್ತಿದ್ದು, ಇದರಿಂದಾಗಿ ಮೊಬೈಲ್ ಛಾಯಾಚಿತ್ರ ತೆಗೆಯುವ ಭರಾಟೆ ಇವರಲ್ಲಿ ಅತಿಯಾಗಿದೆ. ಇಲ್ಲಿ ಅಳವಡಿಸಲಾದ ಕೃತಕ ನವಿಲು ಮತ್ತು ಅಣಬೆ ಫೈಬರ್ ಕಲಾಕೃತಿ ಸಹಿತ ಗೊಂಡೆ ಮತ್ತಿತರ ಹೂಗಿಡಗಳು ಹಾಗೂ ಬಿದಿರನ ಗೂಟ ಮಾದರಿಯಲ್ಲಿ ಅಳವಡಿಸಿದ ಕೆಲವೊಂದು ದೀಪಗಳು ಹಾನಿಗೀಡಾಗಿದೆ. ಮಾತ್ರವಲ್ಲದೆ ಇಲ್ಲಿನ ಕಾಲುದಾರಿಗೆ ಬದಲಾಗಿ ಹುಲ್ಲು ಹಾಸಿನ ಮೇಲೆ ಓಡಾಡಿ ಹಸಿರು ಹುಲ್ಲು ಹಳದಿ ಬಣ್ಣಕ್ಕೆ ತಿರುಗಿದೆ ಎಂಬ ಆರೋಪ ಕೇಳಿ ಬಂದಿದೆ.
ತುರ್ತು ಸಭೆ:
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶುಕ್ರವಾರ ಸಂಜೆ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ತುರ್ತು ಸಭೆ ಕರೆದು ಪುರಸಭೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಟ್ರೀ ಪಾರ್ಕ್ ಪ್ರವೇಶಕ್ಕೆ ನಾಗರಿಕರಿಂದ ಕನಿಷ್ಟ ದರ ವಸೂಲಿ ಮಾಡುವ ಬಗ್ಗೆ ಪುರಸಭೆಯೇ ಸ್ವತಃ ನಿರ್ಣಯ ಕೈಗೊಳ್ಳಬೇಕು. ಮುಂದಿನ ಒಂದು ವರ್ಷ ಪ್ರಮೋದ್ ನರ್ಸರಿ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಡುವಂತೆ ಅವರು ಸಲಹೆ ನೀಡಿದ್ದಾರೆ. ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಜಿಲ್ಲಾ ಯೋಜನಾ ನಿರ್ದೇಶಕ ಪ್ರಸನ್ನ, ಗುತ್ತಿಗೆದಾರ ಸುಧಾಕರ ಶೆಟ್ಟಿ ಮೊಗರೋಡಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇದ್ದರು ಎಂದು ತಿಳಿದು ಬಂದಿದೆ.
-ಮೋಹನ್ ಕೆ.ಶ್ರೀಯಾನ್ ರಾಯಿ