ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಇವುಗಳ ಸಹಯೋಗದಲ್ಲಿ ಅ.20ರಂದು ಗುರುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನದಲ್ಲಿ `ಬೇಂದ್ರೆ ಕಾವ್ಯಾನುಭವ’ ರಾಷ್ಟ್ರೀಯ ವಿಚಾರಸಂಕಿರಣ ಕಾರ್ಯಕ್ರಮ ಆಯೋಜಿಸಿದ್ದು, ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಧಾರವಾಡ ಇದರ ಅಧ್ಯಕ್ಷ ಮತ್ತು ಹಿರಿಯ ಸಾಹಿತಿ ಡಾ| ಶ್ಯಾಮಸುಂದರ ಬಿದರಕುಂದಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ದೆಹಲಿಯಲ್ಲಿನ ವಿಚಾರವಾದಿ, ಚಿಂತಕ ಡಾ| ಪುರುಷೋತ್ತಮ ಬಿಳಿಮಲೆ ಹಾಗೂ ಕನ್ನಡ ಅಧ್ಯಯನ ಕೇಂದ್ರ ಧಾರವಾಡ ಇದರ ಮುಖ್ಯಸ್ಥ ಡಾ| ಧನವಂತ ಹಾಜವಗೋಳ ವೇದಿಕೆಯಲ್ಲಿ ಅಸೀನರಾಗಿದ್ದು ಸಂಶೋಧಕ ಹಾಗೂ ವಿಮರ್ಶಕ ಡಾ| ಸರ್ಫ್‍ರಾಜ್ ಮತ್ತು ಕಲಾವಿದ ಅನಂತ ದೇಶಪಾಂಡೆ ಬೇಂದ್ರೆ ಕುರಿತು ಉಪನ್ಯಾಸ ನೀಡಿದರು.

ಡಾ| ಪುರುಷೋತ್ತಮ ಬಿಳಿಮಲೆ ಮಾತನಾಡಿ ಬೇಂದ್ರೆ ಅಂದರೆ ರೋಮಾಂಚಕ ಮತ್ತು ಜೀವನಕ್ಕೆ ಉತ್ಸಹ ತುಂಬುವ ಶಕ್ತಿಯಾಗಿದೆ. ಅವರ ನಾಲ್ಕು ಕವನ ಸಂಕಲನಗಳು ಜಗತ್ತಿನ ಯಾವುದೇ ಸಾಹಿತ್ಯ, ಭಾಷೆಗಳ ತರ್ಕಕ್ಕೂ ನಿಲ್ಲದ ಕೃತಿಗಳಾಗಿವೆ. ಇಂತಹ ಮೇಧಾವಿಗಳ ಕೃತಿಗಳ ಓದಿನಿಂದ ಮಹಾನುಭವ ಸಾಧ್ಯ. ಮತ್ತು ಓದಿನಿಂದ ಘನತೆ ರೂಪಿಸಿಕೊಳ್ಳ ಬಹುದು. ಜಗತ್ತಿನ ತೀವ್ರಗತಿಯ ಬದಲಾವಣೆಯಲ್ಲಿ ಎಲ್ಲಾ ತರದ ಓದು ಮಹತ್ವದ್ದಾಗಿದ್ದು, ಬದಲಾಗುವ ಯುಗಕ್ಕೆ ಓದು ಮಾನದಂಡವಾಗಿದೆ. 30ರ ದಶಕದ ಕವಿಗೆ 21ನೇ ಶತಮಾನದಲ್ಲೂ ಮಹತ್ವವಿದೆ ಅಂದರೆ ಬೇಂದ್ರೆ ಬರಹ ಎಷ್ಟು ಪ್ರಭಾವಶಾಲಿ ಇರಬಹುದೆಂದು ಊಹಿಸಲಾಸಾಧ್ಯ. ಇಂದಿನ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುವಿಕೆಯ ಸ್ವಹಸ್ತಲೇಖನ (ಆಟೋಗ್ರಫಿಯಲ್ಲೂ) ಬೇಂದ್ರೆ ವಚನ ಸಾಲುಗಳು ರಾರಾಜಿಸುತ್ತಿರುವುದು ಅವರ ಕಾವ್ಯದ ಅಂತ್ಯಪ್ರಾಸ (ರೈಮಿಂಗ್) ಶಕ್ತಿ ತೋರ್ಪಡಿಸುತ್ತಿದೆ. ಆದುದರಿಂದಲೇ ಮಾತೃತ್ವದ ಶಕ್ತಿಕೊಡುವ ಸ್ಪರ್ಶ ಬೇಂದ್ರೆ ಕವನಕ್ಕಿದೆ. ಇಂತಹ ಪದ್ಯಗದ್ಯಗಳ ಅಳವಡಿಸುವಿಕೆಯಿಂದ ಕ್ರೌರ್ಯ ಮುಕ್ತ ಸಮಾಜ ಕಟ್ಟಲು ಸಾಧ್ಯ ಎಂದರು.

ಬೇಂದ್ರೆ ಸಾಹಿತ್ಯದ ಮೂಲ ಪ್ರಕಾಶಕ ವಾಮನ ಬೇಂದ್ರೆ ಆಗಿದ್ದರು. ಕವನಕ್ಕೆ ಭಾವ ಸಂಬಂಧ, ವಿಶೇಷ ಟಿಪ್ಪಣಿ ದರ್ಶಕ ನೀಡಿದವರು. ಬೇಂದ್ರೆ ಅವರ ಗದ್ಯಪದ್ಯ, ಬದುಕುಗಳ ಸಂಶೋಧನೆ ಅಗತ್ಯವಿಲ್ಲ. ಇವೆಲ್ಲವೂ ಬೇಂದ್ರೆ ಸಾಹಿತ್ಯದಲ್ಲಿ ಸಂಸ್ಕಾರವಾಗಿ ಮೂಡಿ ಬಂದಿದೆ. ಬೇಂದ್ರೆ ಸಾಹಿತ್ಯ ಕೃತಿಗಳಲ್ಲೇ ಚಿಂತನೆಗಳು ಅಭಿವ್ಯಕ್ತವಾಗಿದ್ದು, ನವ ಮಾನವತೆಯ ಉದಯಕ್ಕೆ ಬೇಂದ್ರೆ ಬದುಕು ಮಾದರಿ ಎಂದು ಡಾ| ಬಿದರಕುಂದಿ ತಿಳಿಸಿದರು.
ಮಹಾರಾಷ್ಟ್ರದ ಕನ್ನಡಿಗರಿಂದ ರೂಪಿತ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಸಂಪಾದಿತ ಬೇಂದ್ರೆ ಟ್ರಸ್ಟ್ ಧಾರವಾಡ ಪ್ರಕಾಶಿತ `ಬೇಂದ್ರೆ ಕವಿತೆಗಳ ಪ್ರಾಯೋಗಿಕ ವಿಮರ್ಶೆ’ ಕೃತಿಯನ್ನು ಡಾ| ಪುರುಷೋತ್ತಮ ಬಿಳಿಮಲೆ ಬಿಡುಗಡೆ ಗೊಳಿಸಿದರು. ಕನ್ನಡ ವಿಭಾಗ ಸಂದರ್ಶಕ ಪ್ರಾಧ್ಯಾಪಕ ಡಾ| ಕೆ.ರಾಘುನಾಥ್ ಕೃತಿ ವಿಮರ್ಶೆಗೈದರು.

ಹಾಡಿನ ಮೂಲಕ ನಾಡು ಕಟ್ಟಿದ ಮಹಾ ಕವಿ ಬೇಂದ್ರೆ. ಕಾವ್ಯಕ್ಕೆ ಮಂತ್ರಮುಗ್ಧ ಹೆಸರು ಬೇಂದ್ರೆ ಅವರದ್ದಾಗಿದೆ. ಸಮರಸ ಬದುಕು ಸಾರಿದ ಯುಗ ಕವಿಯಾದ ಇಂತಹ ಮಹಾನ್ ಪ್ರತಿಭೆಯನ್ನು ಸ್ಮರಿಸುವ ಸುದೀನ ಇದಾಗಿದೆ. ಸಾಹಿತ್ಯ ಕಾವ್ಯದ ಚಿಂತನಕ್ಕೆ ಇದು ಅವಕಾಶವಾಗಿದೆ. ಕನ್ನಡ ಪ್ರಚಾರದಲ್ಲಿ ನಮ್ಮ ವಿಭಾಗ ಸಕ್ರೀಯವಾಗಿದ್ದು, ಇಲ್ಲಿ ವಯಸ್ಸಿನ ಮಿತಿ ಇಲ್ಲದ ವಿದ್ಯಾಥಿರ್sಗಳಿದ್ದಾರೆ. ಇದು ಮುಂಬಯಿ ಕನ್ನಡಿಗರ ಭಾಗ್ಯ ಎಂದು ಡಾ| ಉಪಾಧ್ಯ ಪ್ರಸ್ತಾವಿಕ ನುಡಿಗಳನ್ನಾಡಿದರು.
ಡಾ| ಜಿ.ವಿ ಕುಲಕರ್ಣಿ, ಡಾ| ಸುನೀತಾ ಎಂ.ಶೆಟ್ಟಿ, ಡಾ| ವಿಶ್ವನಾಥ ಕಾರ್ನಾಡ್, ಡಾ| ಮಮತಾ ರಾವ್, ಡಾ| ರಮಾ ಉಡುಪ, ಎಸ್.ಕೆ ಸುಂದರ್, ಸಾ.ದಯಾ, ಶ್ರೀನಿವಾಸ ಜೋಕಟ್ಟೆ, ರತ್ನಾಕರ ಆರ್.ಶೆಟ್ಟಿ, ನ್ಯಾ| ವಸಂತ ಕಲಕೋಟಿ, ಕರುಣಾಕರ ಹೆಜ್ಮಾಡಿ ದಾಕ್ಷಾಯಣಿ ಯಡಹಳ್ಳಿ, ಸುರೇಖಾ ದೇವಾಡಿಗ ಮತ್ತಿತರನೇಕರು ಉಪಸ್ಥಿತರಿದ್ದು, ಕಲಾಸೌರಭ ಮುಂಬಯಿ ಇದರ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಬೇಂದ್ರೆ ಗೀತಗುಂಜನ ಪ್ರಸ್ತುತಿ ಪಡಿಸಿದ್ದು, ಶೇಖರ್ ಸಾಲ್ಯಾನ್ ಸಸಿಹಿತ್ಲು (ಹಾರ್ಮೋನಿಯಂ), ಸಂಜಯ್ ವಿಚಾರೆ (ತಬಲಾ)ದೊಂದಿಗೆ ಸಂಗೀತ ನೀಡಿದ್ದು ಕು| ಶ್ರದ್ಧಾ ಬಂಗೇರ ಮತ್ತು ಅಪರ್ಣ ಭಟ್, ಸುಶೀಲ ಎಸ್.ದೇವಾಡಿಗ ಗಾಯನಗೈದರು.
ಇತ್ತೀಚೆಗೆ ಸ್ವರ್ಗಸ್ಥರಾದ ವಾಮನ ಬೇಂದ್ರೆ ಅವರ ಜೀವನಶೈಲಿ ಬಗ್ಗೆ ಡಾ| ಶ್ಯಾಮಸುಂದರ ಅವರು ಸ್ಥೂಲವಾಗಿ ಮಾಹಿತಿ ನೀಡಿ ನುಡಿ ನಮನ ಸಲ್ಲಿಸಿದ್ದು, ಬಳಿಕ ಎಲ್ಲಾ ಸಾಹಿತಿಗಳಿಗೆ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಕುಂದ ಕುಲಕರ್ಣಿ ಅವರ ಭಾವಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಡಾ| ಜ್ಯೋತಿ ದೇವಾಡಿಗ ಧನ್ಯವದಿಸಿದರು.
