ಪೂಂಜಾಲಕಟ್ಟೆ: ಮನಸ್ಸಿನ ಸಂಕಲ್ಪ ಶಕ್ತಿಯಿಂದ ಮಾತ್ರ ಒಂದು ಧಾರ್ಮಿಕ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಬಹುದು. ಅಭಿವೃದ್ಧಿ ಕಾರ್ಯದಲ್ಲಿ ಆರ್ಥಿಕ ಶಕ್ತಿಯ ಜತೆಗೆ ನಿರ್ಮಲ ಮನಸ್ಸು ಅತಿ ಆಗತ್ಯ. ಸರಕಾರ ಮತ್ತು ಸಮಾಜ ಒಗ್ಗಟ್ಟಿನಲ್ಲಿ ಸಾಗುವ ಮೂಲಕ ಅಭಿವೃದ್ಧಿಯನ್ನು ಸುಲಭವಾಗಿಸಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತ ಸಾಮೂಹಿಕ ಸಂಕಲ್ಪ, ಗಣಹೋಮ ಹಾಗೂ ಏಕಾದಶ ರುದ್ರ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ದೀಪಬೆಳಗಿಸಿ, ಆಶೀರ್ವಚನ ನೀಡಿದರು. ಯಾವುದೇ ಕಾರ್ಯದಲ್ಲಿ ಶ್ರದ್ಧೆ ಅತಿ ಅಗತ್ಯ. ಶ್ರದ್ಧೆಯೇ ಯಶಸ್ಸಿನ ಸೂತ್ರ. ನಾವು ದಿವ್ಯಶಕ್ತಿಯಿಂದ ಭವ್ಯತೆಯನ್ನು ಸಾಧಿಸಬಹುದು ಎಂದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ದೇವತಾ ಕಾರ್ಯದಲ್ಲಿ ಚರ್ಚೆಗಳನ್ನು ಬದಿಗಿಟ್ಟು, ಸತ್ಕರ್ಮಗಳತ್ತ ಮುಂದಡಿ ಇಡಬೇಕು. ಮನಸ್ಸಿನ ಭಾವನೆಗಳ ಕೊರತೆಯನ್ನು ನೀಗಿಸಿದಾಗ ಸಾಮಾಜಿಕ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ನಾವು ದೇವರ ಭೂಮಿಯಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ನಮ್ಮಲ್ಲಿನ ಐಶರ್ಯ ಅದು ದೇವರು ನೀಡಿದ್ದು, ಅದನ್ನು ಅವರಿಗೇ ಸಮರ್ಪಿಸುವುದರಲ್ಲಿ ನಿಜವಾದ ಭಕ್ತಿ ಅಡಗಿದೆ. ಸರಪಾಡಿ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಅನುದಾನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮ ಯೋಗ್ಯ-ಭಾಗ್ಯಗಳು ಭಗವಂತನ ಸಂಕಲ್ಪವಾಗಿದೆ. ಅದನ್ನು ನಾವು ಆತನ ಕಾರ್ಯಗಳಿಗೆ ಮೀಸಲಿಡಬೇಕು. ಒಂದು ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದರೆ, ಅದರಿಂದ ನೂರು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಪುಣ್ಯ ಲಭಿಸುತ್ತದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್, ಕ್ಷೇತ್ರದ ತಂತ್ರಿ ದಿನೇಶ್ಕೃಷ್ಣ ತಂತ್ರಿ, ಡಾ. ಎಚ್.ಶಂಕರನಾರಾಯಣ ರಾವ್ ಹಲ್ಸನಾಡು, ಆಡಳಿತ ಮೊಕ್ತೇಸರ ಎನ್.ಸುಬ್ಬಣ್ಣ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎಸ್.ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಎಚ್. ವಂದಿಸಿದರು. ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾಮೂಹಿಕ ಸಂಕಲ್ಪ, ನಿಧಿಕುಂಬ ಸಂಚಯ, ಗಣಹೋಮ, ಏಕಾದಶ ರುದ್ರ, ಮಹಾಪೂಜೆ, ಅನ್ನಸಂತರ್ಪಣೆ ನೆರವೇರಿತು.
