ಸುದ್ದಿ9ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳ ವಿರುದ್ದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಬುಧವಾರ ಬೆಳಿಗ್ಗೆ ದಿಡೀರ್ ಕಾರ್ಯಚರಣೆ ನಡೆಸಿದರು. ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಮುಂಭಾಗ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮರಳು ಸಾಗಟದ ಬಗೆಗಿನ ಪರವಾನಗಿ ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಬೆಳ್ತಂಗಡಿಯಲ್ಲಿನ ಕಾರ್ಯಕ್ರಮವೊಂದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಜೊತೆ ತೆರಳುತ್ತಿದ್ದ ವೇಳೆ ಎಗ್ಗಿಲ್ಲದೆ ಸಂಚರಿಸುತ್ತಿದ್ದ ಮರಳು ಸಾಗಾಟದ ಲಾರಿಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಬಿ.ಸಿ.ರೋಡಿನಲ್ಲಿ ತನ್ನ ವಾಹನದಿಂದ ಕೆಳಗಿಳಿದು ಮರಳು ಸಾಗಾಟದ ಎಲ್ಲಾ ವಾಹನಗಳನ್ನು ತಡೆಯುವಂತೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ನೀಡಿದ್ದರು. ಬಂಟ್ವಾಳ ತಹಸೀಲ್ದಾರ್ ಮಲ್ಲೇಸ್ವಾಮಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬೆಳಿಯಪ್ಪ ಹಾಗೂ ನಗರ ಎಸೈ ನಂದಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಅಕ್ರಮ ಮರಳು ಸಾಗಾಟದ ವಾಹನಗಳನ್ನು ತಪಾಸಣೆ ನಡೆಸಿ ಅಕ್ರಮ ಮರಳು ಸಾಗಾಟದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಡಿಸಿ ಆದೇಶಿಸಿ ಬೆಳ್ತಂಗಡಿಗೆ ತೆರಳಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರಾ.ಹೆದ್ದರಿಯಲ್ಲಿ ಆಗಮಿಸುತ್ತಿದ್ದ ಎಲ್ಲಾ ಮರಳು ಸಾಗಾಟದ ಲಾರಿಗಳನ್ನು ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು.
ಡಿ.ಸಿ.ದಿಡೀರ್ ಕಾರ್ಯಚರಣೆಯಿಂದ ಬಿ.ಸಿ.ರೋಡಿನಲ್ಲಿ ಜನರು ಗೊಂದಲಕ್ಕೊಳಗಾದರು. ಕಳೆದ ಬಾರಿ ಬಿ.ಸಿ.ರೋಡಿಗೆ ಭೇಟಿ ನೀಡಿದ್ದ ಸಂದರ್ಭ ಡಿವೈಡರ್ ತೆರವುಗೊಳಿಸಲು ಸೂಚನೆ ನೀಡಿದ್ದ ಜಿಲ್ಲಾಧಿಕಾರಿಯವರು ಅದೇ ಸ್ಥಳದಲ್ಲಿ ನಿಂತು ವಾಹನಗಳ ದಾಖಲೆ ತಪಾಸಣೆ ಪ್ರಾರಂಭಿಸಿದ್ದರು. ಅವೈಜ್ಞಾನಿಕ ಸ್ಥಿತಿಯಲ್ಲಿರುವ ಚತುಷ್ಪಥ ಹೆದ್ದಾರಿ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಧಿಕಾರಿ ಇಲ್ಲಿಗೆ ಆಗಮಿಸಿದ್ದಾರೆ ಎಂದೇ ಸಾರ್ವಜನಿಕರು ಭಾವಿಸಿದ್ದರು. ಆದರೆ ಜಿಲ್ಲಾಧಿಕಾರಿ ರಸ್ತೆ ವೀಕ್ಷಿಸುವ ಬದಲು ಲಾರಿಗಳನ್ನು ಮಾತ್ರ ತಡೆಹಿಡಿಯುತ್ತಿರುವುದನ್ನು ಕಂಡು ಜನತೆ ಗೊಂದಲಕ್ಕೀಡಾಗಿದ್ದರು. ಬಳಿಕವಷ್ಟೇ ಅಕ್ರಮ ಮರಳು ಸಾಗಾಟ ಲಾರಿಗಳ ವಿರುದ್ದ ಕಾರ್ಯಚರಣೆ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟರು.



