ಬಂಟ್ವಾಳ: ಪಾಣೆಮಂಗಳೂರು ಶಾರದ ಪ್ರೌಢ ಶಾಲೆಯ ಬಳಿಯಿರುವ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂಗೆ ಸಂಪರ್ಕ ಕಲ್ಪಿಸುವ ತೋಡಿಗೆ ಭಾರೀ ಪ್ರಮಾಣದಲ್ಲಿ ಸ್ಥಳೀಯ ಜನರು ತ್ಯಾಜ್ಯಗಳನ್ನು ಎಸೆಯುತ್ತಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

3......

ಬಂಟ್ವಾಳ ಪುರಸಭೆ ಹಾಗೂ ಸಜೀಪಮುನ್ನೂರು ಗ್ರಾಮದ ಗಡಿಯಾದ ಪಾಣೆಮಂಗಳೂರು ಶಾರದ ಪ್ರೌಢ ಶಾಲೆ ಬಳಿಯಿರುವ ಸೇತುವೆಯ ಮೇಲಿನಿಂದ ಸ್ಥಳೀಯರು ನೀರಿಗೆ ತ್ಯಾಜ್ಯಗಳನ್ನು ಸುರಿಯುತ್ತಿದ್ದಾರೆ. ಈ ನೀರು ಮಂಗಳೂರು ನಗರಕ್ಕೆ ಕುಡಿಯಲು ಪೂರೈಕೆಗಾಗಿ ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರಾಗಿದೆ. ಕುಡಿಯುವ ನೀರಿಗೆ ತ್ಯಾಜ್ಯಗಳನ್ನು ಎಸೆಯುತ್ತಿರುವುದನ್ನು ತಡೆಯಲು ವಿಫಲವಾಗಿರುವ ಆಡಳಿತದ ವಿರುದ್ಧ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಸಜಿಪ ಮುನ್ನೂರು ಗ್ರಾಮದ ನಂದಾವರದಲ್ಲಿ ಸಾವಿರಾರು ಮನೆಗಳಿವೆ. ನೂರಾರು ಅಂಗಡಿ, ಹೊಟೇಲ್ ಸಹಿತ ವ್ಯಾಪಾರ ಮಳಿಗೆಗಳಿವೆ. ಆದರೆ ಇಲ್ಲಿ ಕಸದ ವಿಲೇವಾರಿಗೆಂದು ಸೂಕ್ತ ವ್ಯವಸ್ಥೆಯೇ ಇಲ್ಲ. ಈ ಕಾರಣಕ್ಕೆ ಇಲ್ಲಿನ ಜನರು ಮನೆ, ಅಂಗಡಿ ಮುಂಗಟ್ಟುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತುಂಬೆ ಡ್ಯಾಂಗೆ ಸಂಪರ್ಕ ಕಲ್ಪಿಸುವ ಪಾಣೆಮಂಗಳೂರು ಶಾರದ ಪ್ರೌಢ ಶಾಲೆಯ ಬಳಿಯಿರುವ ಸೇತುವೆ ಅಡಿಭಾಗದ ನೀರಿಗೆ ತಂದು ಸುರಿಯುತ್ತಾರೆ.

ಹೆಚ್ಚಿನವರು ಸೇತುವೆಯ ಕೆಳಗೆ ಸುರಿದರೆ ಇನ್ನು ಕೆಲವರು ಸೇತುವೆಯ ಇಕ್ಕೆಳೆಗಳಲ್ಲಿ ಹಾಕುತ್ತಾರೆ. ಸೇತುವೆಯ ಒಂದು ಭಾಗದಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದ್ದು ನಾಯಿಗಳ ಕಾಟವೂ ಹೆಚ್ಚಾಗಿದೆ. ಈ ದಾರಿ ಮೂಲಕ ನಡೆದುಕೊಂಡು ಹೋಗುವ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಭಯಭೀತರಾಗುತ್ತಾರೆ. ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯುವುದರಿಂದ ತ್ಯಾಜ್ಯದ ಸೇವನೆಗೆಂದು ಬೀದಿ ದನಗಳು ಇಲ್ಲಿ ಬಂದು ಸೇರುತ್ತದೆ. ದನಗಳು ಏಕಾಏಕಿ ರಸ್ತೆಗೆ ಬರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ರಿಕ್ಷಾ ಚಾಲಕರೊಬ್ಬರು ಆರೋಪಿಸುತ್ತಾರೆ.

1.............

ಕಸ ವಿಲೇವಾರಿಗೆಂದು ಪುರಸಭೆ ತಿಂಗಳಿಗೆ 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡುತ್ತದೆ. ಮನೆ ಮನೆ ಕಸ ಸಂಗ್ರಹಕ್ಕೆಂದು ವಾಹನಗಳೂ ಇವೆ. ಆದರೆ ವಾಹನಗಳು ಕಸ ಸಂಗ್ರಕ್ಕೆಂದು ಮನೆ ಮನೆ ಸರಿಯಾಗಿ ಬರುತ್ತಿಲ್ಲ. ಮನೆಯಲ್ಲಿ ಉತ್ಪತ್ತಿಯಾಗುವ ಕಸ ಹಾಗೂ ತ್ಯಾಜ್ಯವನ್ನು ಮತ್ತೆಲ್ಲಿ ಬಿಸಾಡಬೇಕು. ಬೇರೆ ಯಾವುದೇ ದಾರಿಯಿಲ್ಲದೆ ನೇತ್ರಾವತಿ ನದಿಗೆ ಸಂಪರ್ಕ ಕಲ್ಪಿಸುವ ತೋಡಿಗೆ ಬಿಸಾಡುತ್ತೇವೆ ಎಂದು ಸಮಜಾಯಿಸಿಕೆ ನೀಡುತ್ತಾರೆ ಪಾಣೆಮಂಗಳೂರಿನ ನಾಗರಿಕರು.

ನಮ್ಮದು ಗ್ರಾಮ ಪಂಚಾಯತ್ ವ್ಯಾಪ್ತಿ. ಇಲ್ಲಿ ಕಸ ವಿಲೇವಾರಿಗೆಂದು ಯಾವುದೇ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ 2ರಿಂದ 3 ಸಾವಿರ ಮನೆಗಳಿದ್ದರೂ ಕಸ ವಿಲೇವಾರಿಗೆಂದು ಗ್ರಾಮ ಪಂಚಾಯತ್ ಯಾವುದೇ ವ್ಯವಸ್ಥೆ ಮಾಡಿಲ್ಲ. ಒಂದೆಡೆ ಕಸ ರಾಶಿ ಹಾಕುವ ಎಂದರೆ ಎಲ್ಲಡೆಯೂ ವಸತಿ ಪ್ರದೇಶವಾಗಿದೆ. ಬೇರೆ ದಾರಿ ಇಲ್ಲದಿರುವುದರಿಂದ ಕಸವನ್ನು ತಂದು ನದಿಗೆ ಬಿಸಾಡುತ್ತೇವೆ ಎಂದು ಸಜೀಪ ಮುನ್ನೂರು ಗ್ರಾಮಸ್ಥರ ಆರೋಪ.

6....

ನಾವು ನೇತ್ರಾವತಿ ನದಿ ನೀರನ್ನು ಕುಡಿಯುವುದಿಲ್ಲ. ಹಾಗಂತ ಮಂಗಳೂರಿನ ಸಾವಿರಾರು ಮಂದಿ ಕುಡಿಯಲು ನೇತ್ರಾವತಿ ನೀರನ್ನು ಅವಲಂಭಿಸಿದ್ದಾರೆ. ಯಾರೇ ಆದರೂ ಕುಡಿಯುವ ನೀರಿಗೆ ತ್ಯಾಜ್ಯ ಎಸೆಯುವುದು ಸರಿಯಲ್ಲ. ನದಿ ಹಾಗೂ ಶಾಲಾ ಆವರಣ, ರಸ್ತೆ ಬದಿ ಕಸ ಎಸೆಯದಂತೆ ಎಚ್ಚರಿಕೆ ನೀಡಿ ಬ್ಯಾನರ್ ಕೂಡಾ ಅಳವಡಿಸಿದ್ದೆವು. ಆದರೆ ಮರು ದಿನವೇ ಯಾರೋ ಬ್ಯಾನರನ್ನು ಹರಿದು ಬಿಸಾಡಿದ್ದಾರೆ. ಪುರಸಭೆ, ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮೌಕಿಕವಾಗಿ ಮನವಿ ಸಲ್ಲಿಸಿ ಸಾಕಾದವು. ಸಾರ್ವಜನಿಕ ಹಿತ ದೃಷಿಯಿಂದ ನದಿ ಹಾಗೂ ರಸ್ತೆ ಬದಿ ಕಸ ಎಸೆಯದಂತೆ ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸ್ಥಳೀಯವಾಗಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *