ಬಂಟ್ವಾಳ: ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಹೊರಾಂಗಣಕ್ಕೆ ಕಲ್ಲು ಹಾಸುವ ಕಾಮಗಾರಿ ಭರದಿಂದ ನಡೆಯುತ್ತಿದೆ. ತಾಲೂಕಿನ ಗ್ರಾಮೀಣ ಪ್ರದೇಶ ಅರಳ ಗ್ರಾಮದಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಪುರಾಣ ಪ್ರಸಿದ್ಧ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಫೆ.1 ರಿಂದ ಮೊದಲ್ಗೊಂಡು 11 ರ ತನಕ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವವು ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ರಾಜೇಂದ್ರ ಶೆಟ್ಟಿ ಹೇಳಿದ್ದಾರೆ.
ಅರಳ ದೇವಸ್ಥಾನದ ಸಭಾಂಗಣದಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಪಟ್ಟ ಈ ಕ್ಷೇತ್ರಕ್ಕೆ ಫೆ.2ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಅರಳ ಗ್ರಾಮದ ಅಂಗಡಿ ಚಾವಡಿ ಮತ್ತು ಗುಡ್ಡೆ ಅಂಗಡಿ ಹಾಗೂ ಕೊಯಿಲ ಗ್ರಾಮದ ಅಣ್ಣಳಿಕೆಯಲ್ಲಿ ಭಕ್ತರಿಂದ ಸಂಗ್ರಹಗೊಂಡು ಆಕರ್ಷಕ ಹೊರೆ ಕಾಣಿಕೆ ಶೊಭಾಯಾತ್ರೆ ಕ್ಷೇತ್ರಕ್ಕೆ ಬರಲಿದೆ. ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ತಂತ್ರಿ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಭಕ್ತರಿಂದ ಚಂಡಿಕಾಯಾಗ, ಭಜನೆ, ಹರಿಕಥೆ, ನಾಟಕ, ಭರತನಾಟ್ಯ, ತಾಳಮದ್ದಳೆ, ಯಕ್ಷಗಾನ, ಪರಿವಾರ ದೈವಗಳ ನೇಮೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸುಮಾರು 800 ವರ್ಷಗಳ ಹಿಂದೆ ವೇಣೂರು ಅಜಿಲ ಅರಸ ವಂಶಸ್ತರಿಂದ ಪೂಜಿಸಲಾಗುತ್ತಿತ್ತು ಎಂಬ ಪ್ರತೀತಿ ಹೊಂದಿರುವ ಈ ಕ್ಷೇತ್ರದಲ್ಲಿ ಅಷ್ಟಭುಜ ಗಳಲ್ಲಿ ವಿವಿಧ ಆಯುಧ ಸಹಿತ ಏಳೂವರೆ ಅಡಿ ಎತ್ತರದ ಬೃಹತ್ ಗಾತ್ರದ ದಾರು (ಮರ) ಮಹಾಕಾಳಿ ವಿಗ್ರಹವು ನೀಳವಾದ ನಾಲಗೆ ಹೊರಚಾಚಿಕೊಂಡಿರುವ ಶಿಲ್ಪ ದಕ್ಷಿಣ ಭಾರತದಲ್ಲೇ ಅಪರೂಪ ಎಂದು ಹೇಳಲಾಗುತ್ತಿದೆ.
ಅರಳ ಮತ್ತು ಕೊಯಿಲ ಗ್ರಾಮಗಳ ಭಕ್ತರಿಗೆ ‘ಗ್ರಾಮದೇವತೆ’ಯಾಗಿರುವ ಈ ಕ್ಷೇತ್ರವು ಕಳೆದ 12 ವರ್ಷಗಳ ಹಿಂದೆ ಕೇವಲ 108 ದಿನಗಳಲ್ಲಿ ಒಟ್ಟು ರೂ 1.20ಕೋಟಿ ವೆಚ್ಚದಲ್ಲಿ ಸಂಪೂರ್ಣ ಪುನರ್ನವೀಕರಣಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮ ಕಂಡಿದೆ. ಇದೇ ವೇಳೆ ಕಾಂಕ್ರೀಟು ಸುತ್ತು ಪೌಳಿ, ಗರ್ಭಗುಡಿ ಮಾಡಿಗೆ ತಾಮ್ರದ ಹೊದಿಕೆ, ಮೇಲ್ಛಾವಣಿಗೆ ಶೀಟು ಅಳವಡಿಕೆ, ನೂತನ ಸಭಾಂಗಣ ನಿರ್ಮಾಣಗೊಂಡಿದೆ. ಕಳೆದ ಏಳು ವರ್ಷಗಳ ಹಿಂದೆ ಇಲ್ಲಿಗೆ ಸಂಬಂಧಪಟ್ಟ ಕೊಟ್ಟದಡ್ಕ ದೈವಸ್ಥಾನವೂ ಪುನರ್ ನಿರ್ಮಾಣಗೊಂಡು ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದೆ.
ಅರಳ ಮತ್ತು ಕೊಯಿಲ ಎರಡು ಗ್ರಾಮದಲ್ಲಿ ಭಂಡಾರ ಮನೆ ಹೊಂದಿರುವುದು ಇಲ್ಲಿನ ವೈಶಿಷ್ಟ್ಯತೆಯಾಗಿದ್ದು, ಗರುಡ ಸಹಿತ ಮಹಾಕಾಳಿ ಮತ್ತು ಮಹಾಗಣಪತಿ ದೇವರ ದಾರು ವಿಗ್ರಹ ಮಾತ್ರವಲ್ಲದೆ ಪರಿವಾರ ದೈವಗಳಾಗಿ ಉಳ್ಳಾಲ್ತಿ, ಧೂಮಾವತಿ, ಮಹಿಷಂತಾಯ, ಕುಂಭಕಂಠಿಣಿ, ಇಷ್ಟದೈವ ಒಡ್ಯಾಣೇಶ್ವರಿ, ಕಲ್ಕುಡ, ಕಲ್ಲುರ್ಟಿ ದೈವವೂ ಇಲ್ಲಿದೆ.
ಇದೀಗ ಬ್ರಹ್ಮಕಲಶೋತ್ಸವ ಪ್ರಯುಕ್ತ ಮತ್ತೆ ರೂ 80ಲಕ್ಷ ವೆಚ್ಚದಲ್ಲಿ ಒಳಾಂಗಣ ಮತ್ತು ಹೊರಾಂಗಣಕ್ಕೆ ಕಲ್ಲು ಹಾಸುವಿಕೆ, ಕುಡಿಯುವ ನೀರಿನ ಟ್ಯಾಂಕ್ ರಚನೆ, ವಾಹನದಟ್ಟಣೆ ತಡೆಯಲು ಇಲ್ಲಿನ ಎರಡು ಎಕರೆ ಜಮೀನು ಖರೀದಿಸಿ ಸಮತಟ್ಟುಗೊಳಿಸಲಾಗುತ್ತಿದ್ದು, ಎರಡು ಪರ್ಯಾಯ ರಸ್ತೆ ನಿರ್ಮಾಣ, ಪ್ರಾಂಗಣ ವಿಸ್ತಾರ ಮತ್ತಿತರ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ದೇವಳಕ್ಕೆ ನೂತನ ರಥ ಸಮರ್ಪಣೆ, ಆವರಣಗೋಡೆ ರಚನೆ, ಪಾಕಶಾಲೆ, ಪ್ರವಾಸಿ ಭಕ್ತರಿಗೆ ವಸತಿಗೃಹ ಮತ್ತಿತರ ಸೌಲಭ್ಯ ಒದಗಿಸಲು ಭಕ್ತರು ಮತ್ತು ಸರ್ಕಾರದಿಂದ ಆರ್ಥಿಕ ನೆರವು ಬೇಕಾಗಿದೆ ಎಂದು ಅವರು ವಿನಂತಿಸಿಕೊಂಡರು.
ಹೆಗ್ಗಡೆ, ಸುಬ್ರಹ್ಮಣ್ಯ ಶ್ರೀ ಭೇಟಿ:
ಫೆ.4ರಂದು ಬೆಳಿಗ್ಗೆ ಗಂಟೆ 9.30ರಿಂದ ಕ್ಷೇತ್ರದಲ್ಲಿ ಚಂಡಿಕಾ ಯಾಗ’ ನಡೆಯಲಿದ್ದು, ಅಂದು ಸಂಜೆ 5ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಸಂಸ್ಥಾನ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಉದ್ಯಮಿ ರಘು ಎಲ್.ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು.
ಫೆ.6ರಂದು ಬೆಳಿಗ್ಗೆ ಗಂಟೆ 9.45ರಿಂದ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಬೆಳಿಗ್ಗೆ ಗಂಟೆ 10.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸಂಸ್ಕಾರ ಭಾರತಿ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಮುಂಬೈ ಉದ್ಯಮಿ ಮುಂಡಪ್ಪ ಪಯ್ಯಡೆ, ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕರಾವಳಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎಸ್.ಗಣೇಶ ರಾವ್, ಅಮ್ಟಾಡಿ ಕ್ಷೇತ್ರ ಧರ್ಮದರ್ಶಿ ರವಿಶಂಕರ ಶೆಟ್ಟಿ ಅಜ್ಜಿಬೆಟ್ಟು ಗುತ್ತು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್.ಎಂ.ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿ ಎಸ್.ಮುರಳೀಧರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ
ಪ್ರಧಾನ ಕಾರ್ಯದರ್ಶಿ ಜಗದೀಶ ಆಳ್ವ ಅಗ್ಗೊಂಡೆ, ಪ್ರಧಾನ ಅರ್ಚಕ ಎ.ರಾಜ ಭಟ್ ಹುಣ್ಸೆಯಡಿ, ಕೋಶಾಧಿಕಾರಿ ರಂಜನ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶೀ ಡೊಂಬಯ ಬಿ.ಅರಳ, ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ರಾಯಿ, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
