ಬಂಟ್ವಾಳ: ಪ್ರಕೃತಿ ಉಳಿಯಬೇಕಾದರೆ ಧಾರ್ಮಿಕ ಶ್ರದ್ದಾಕೇಂದ್ರಗಳ ನಿರ್ಮಾಣವಾಗಬೇಕು. ಇಲ್ಲಿಯೂ ಪ್ರಕೃತಿ ರಮಾಣೀಯ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದರು.
ಕೆಳಗಿನ ಮಂಡಾಡಿಯ ಗಿರಿಗುಡ್ಡೆಯಲ್ಲಿ ಶ್ರೀ ವನದುರ್ಗಾ ಜಲನಾಗ –ಯಕ್ಷಿ ಪುಷ್ಕರಿಣಿ ಮತ್ತು ಧರ್ಮ ದೈವಗಳ ಸಾನಿಧ್ಯ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳಲಿರುವ ವನದುರ್ಗಾ ದೇವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಧರ್ಮ ರಕ್ಷಣೆಯಿಂದ ರಾಷ್ಟ್ರ ನಿರ್ಮಾಣವಾಗುತ್ತದೆ. ಅಪರಾದ ಕೃತ್ಯಗಳು ಧರ್ಮ ಮಾರ್ಗದಿಂದ ನಿಯಂತ್ರಿಸಲ್ಪಡುತ್ತದೆ ಎಂದರು. ಪ್ರತಿಯೊಬ್ಬ ವ್ಯಕ್ತಿಗೂ ದೇಶಾಭಿಮಾನ, ಭಾಷಾಭಿಮಾನ ಬೇಕು. ತುಳು ನಮ್ಮ ಮಾತೃ ಭಾಷೆ. ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಂಡಾಗ ಯಾವುದೇ ಊರಿಗೆ ಹೋದರೂ ನಮ್ಮವರನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತನ್ನ ನೇಪಾಳ ಯಾತ್ರೆಯ ನೆನಪನ್ನು ಸ್ಮರಿಸಿಕೊಂಡರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಶ್ರದ್ದಾಕೇಂದ್ರಗಳ ನಿರ್ಮಾಣ ಹಾಗೂ ಧಾರ್ಮಿಕ ಕಾರ್ಯಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅತ್ಯಂತ ಪಾವಿತ್ರ್ಯತೆಯುಳ್ಳ ಈ ನೆಲದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಪುಣ್ಯಪ್ರದ. ತನ ಮನ ಧನದ ಸಹಾಕರದೊಂದಿಗೆ ಎಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸುವಂತೆ ತಿಳಿಸಿದರು. ಪುರಸಭೆಯ ಅಧ್ಯಕ್ಷ ರಾಮಕೃಷ್ಣ ಆಳ್ವ, ಯೋಜನಾ ಪ್ರಾಧಿಕಾರದ ನಿಕಟಪೂರ್ವಾಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಶುಭಾಶಂಸನೆಗೈದರು. ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜೀಣೋದ್ದಾರ ಸಮಿತಿ ಅಧ್ಯಕ್ಷ ರಾಮಪೂಜಾರಿ ಪಲ್ಕೆ, ಉದ್ಯಮಿ ನಾಗೇಶ್ ಸಾಲ್ಯಾನ್, ಪುರಸಭಾ ಸದಸ್ಯರಾದ ಜಗದೀಶ ಕುಂದರ್, ವಸಂತಿ ಚಂದಪ್ಪ, ಪ್ರಭಾ ಸಾಲ್ಯಾನ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಗೇರು ಅಭಿವೃದ್ದಿ ನಿಗಮದ ಸದಸ್ಯ ಜಗದೀಶ ಕೊೈಲ, ಚೆಂಡ್ತಿಮಾರ್ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಶಿಲ್ಪಿ ಸದಾಶಿವ ಶೆಣೈ, ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಪದ್ಮಾರಾಜ ಬಲ್ಲಾಳ ವೇದಿಕೆಯಲ್ಲಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ, ಪುರಸಭಾ ಸದಸ್ಯ ಗಂಗಾಧರ ಮಂಡಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯಕುಮಾರ್ ಪ್ರಸ್ತಾವಿಸಿದರು, ರಾಜೀವ ಕಕ್ಕೆಪದವು ನಿರೂಪಿಸಿ, ವಂದಿಸಿದರು. ವಸಂತ ಶಾಂತಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸಚಿವ ರೈ ಭೇಟಿ:
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭಾನುವಾರ ಸಂಜೆ ನೂತನವಾಗಿ ನಿರ್ಮಾಣಗೊಳ್ಳಲಿರುವ ವನದುರ್ಗಾ ಸಾನಿಧ್ಯಕ್ಕೆ ಭೇಟಿ ನೀಡಿದರು. ಸಚಿವ ರಮನಾಥ ರೈ ಗೌರವಾಧ್ಯಕ್ಷತೆಯಲ್ಲಿ ಜೀಣೋದ್ದಾರ ಸಮಿತಿ ರಚಿಸಲಾಗಿದ್ದು ಒಟ್ಟು 47 ಲಕ್ಷ ರುಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ.
ಕ್ಷೇತ್ರದ ಹಿನ್ನಲೆ:
ಬಂಟ್ವಾಳ ಕಸ್ಬಾ ಗ್ರಾಮದ ಕೆಳಗಿನ ಮಂಡಾಡಿ ಗಿರಿಗುಡ್ಡೆ ತಪ್ಪಲಲ್ಲಿ ಪೂರ್ವ ಕಾಲದಲ್ಲಿ ವನದುರ್ಗೆಯು ತನ್ನ ಪರಿವಾರ ಶಕ್ತಿಗಳಾದ ಜಲನಾಗ, ಯಕ್ಷಿಯೊಂದಿಗೆ ನೆಲೆನಿಂತ ಕ್ಷೇತ್ರವೇ ಜಲನಾಗ ತೀರ್ಥ. ಋಷಿಮುನಿಗಳು ತಪ್ಪಸ್ಸು ಮಾಡಿದ ಇಲ್ಲಿ ಭೂಗರ್ಭದಿಂದ ಪವಿತ್ರವಾದ ನಾಗತೀರ್ಥ ಒಸರಿ ಒಂದು ತೊರೆಯಾಗಿ ಹರಿಯುತ್ತಿತ್ತು. ಗಿರಿಗುಡ್ಡೆಯ ತುದಿಯಲ್ಲಿ ವೀರಶೈವರ ಕಾಲದಲ್ಲಿ ಗಿರಿನಾಥೇಶ್ವರ ದೇವಾಲಯವಿತ್ತು. ನಂತರ ಅದನ್ನು ಕೆಳಭಾಗದಲ್ಲಿ ಕಟ್ಟಿಸಿ ಶಿವಲಿಂಗ ಪ್ರತಿಷ್ಠೆ ಮಾಡಲಾಗಿತ್ತು. ಈಗ ಶಿವಾಲಯ ಸಂಪೂರ್ಣ ಜೀರ್ಣವಾಗಿದೆ. ಈ ಜಲನಾಗ ತೀರ್ಥದಲ್ಲಿ ಸ್ನಾನ ಮಾಡುವವರಿಗೆ , ನೀರನ್ನು ಕುಡಿಯುವವರಿಗೆ ಯಾವುದೇ ಕಾಯಿಲೆ ಬರುತ್ತಿರಲಿಲ್ಲ. ಈ ಸಾನಿಧ್ಯದ ಸ್ವಲ್ಪ ದೂರದಲ್ಲಿ ರಾಯರ ಚಾವಡಿ ಇದೆ. ಇಲ್ಲಿ ವ್ಯಾಘ್ರ ಚಾಮುಂಡಿ ದೈವ ಇದೆ. ಇಲ್ಲಿ ಹತ್ತಿರ ಗುಪ್ತ ನಿಧಿ ಸ್ಥಾನ, ಸರೀಸೃಪಗಳ ಆವಾಸವಿದೆ. ಅತೀ ಪುರಾತನವಾದ ಈ ಸಾನಿಧ್ಯದಲ್ಲಿ ಕಾಡು ಬೆಳೆದಿದೆ. ತೀರ್ಥ ಸ್ನಾನಕ್ಕೆ ಯಾರು ಬಾರದೆ ಇರವುದರಿಂದ ಗ್ರಾಮಸ್ಥರಿಗೆ ತೊಂದರೆಗಳು ಕಂಡು ಬರುತ್ತಿದೆ. ಈಗ ಗುಡ್ಡದ ತುದಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ವಸತಿಗೃಹಗಳು ತಲೆ ಎತ್ತಿ ನಿಂತಿವೆ. ಊರಿಗೆ ಕಷ್ಟ ನಷ್ಟಗಳು ಬಂದು ಗ್ರಾಮಸ್ಥರು ಸೇರಿ ಈ ಸಾನಿಧ್ಯದಲ್ಲಿ ಅಷ್ಟಮಂಗಳ ಪ್ರಶ್ನೆ ಕೇಳಿದಾಗ ಇದು ಪವಿತ್ರ ಜಲನಾಗ ತೀರ್ಥ ಕ್ಷೇತ್ರ, ವನದುರ್ಗಾ ಹಾಗೂ ರಕ್ತೇಶ್ವರೀ ಮಹಾಮ್ಮಾಯಿ, ಭೈರವ, ಚೌಂಡಿ, ಕಲ್ಲುರ್ಟಿ, ಪಂಜುರ್ಲಿ, ರಾಹು, ಗುಳಿಗ ದೈವಗಳನ್ನು ಹಿಂದೆ ಆರಾಧಿಸಿ ಕಾಲಕ್ರಮೇಣ ನಿಂತು ಹೋಗಿರುವುದಾಗಿ ಪ್ರಶ್ನೆಯಲ್ಲಿ ಕಂಡು ಬಂದಿದೆ. ಈ ಸಾನಿಧ್ಯದಲ್ಲಿ ದೇವಿಯ ಬಯಲು ಆಲಯ, ಜಲನಾಗ ಪುಷ್ಕರಿಣಿ ಹಾಗೂ ಧರ್ಮದೈವಗಳ ಸಾನಿಧ್ಯವನ್ನು ಜೀಣೋದ್ದಾರ ಮಾಡಬೇಕೆಂದು ಪ್ರಶ್ನೆಯಲ್ಲಿ ಗೋಚರಿಸಿದ ಹಿನ್ನಲೆಯಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಪುಷ್ಕರಿಣಿ ನಿರ್ಮಾಣ ಪೂರ್ಣಗೊಂಡಿದೆ.
ಚಿತ್ರ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಆಶೀರ್ವಚನ ನೀಡಿದರು.