ಬಂಟ್ವಾಳ:ತಾಲ್ಲೂಕಿನ ಅರಳ ಗ್ರಾಮದಲ್ಲಿ ಹಾದು ಹೋಗಿರುವ ಮಂಗಳೂರು-ಹಾಸನ-ಬೆಂಗಳೂರು ಇಂಧನ ಸಾಗಾಟ ಪೈಪ್‍ಲೈನ್‍ನಲ್ಲಿ ಯಾವುದೇ ರೀತಿಯ ಹಾನಿ ಅಥವಾ ಕನ್ನ ಮತ್ತಿತರ ಸಮಸ್ಯೆ ಕಂಡು ಬಂದಲ್ಲಿ ಅಲ್ಲಲ್ಲಿ ಅಳವಡಿಸಿರುವ ನಾಮಫಲಕದಲ್ಲಿರುವ ಕಚೇರಿ ಅಥವಾ ಪ್ರತಿನಿತ್ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳಿಗೆ ದೂರವಾಣಿ ಕರೆ ಮೂಲಕ ತ್ವರಿತವಾಗಿ ಮಾಹಿತಿ ನೀಡಬೇಕು. ಆ ಮೂಲಕ ಪೈಪ್‍ಲೈನ್‍ನಿಂದ ಪರಿಸರದಲ್ಲಿ ಯಾವುದೇ ರೀತಿಯ ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ಮತ್ತು ತ್ವರಿತ ದುರಸ್ತಿ ಕಾರ್ಯ ನಡೆಸಲು ಸಹಕಾರಿಯಾಗುತ್ತದೆ ಎಂದು ಮಂಗಳೂರು ಪೆಟ್ರೋನೆಟ್ ಎಂಎಚ್‍ಬಿ ಸಂಸ್ಥೆ ಮೇಲ್ವಿಚಾರಕ ಎ.ರಾಜನ್ ಹೇಳಿದ್ದಾರೆ.
ತಾಲ್ಲೂಕಿನ ಅರಳದಲ್ಲಿ ಮಂಗಳೂರು ಪೆಟ್ರೋನೆಟ್ ಎಂಎಚ್‍ಬಿ ಸಂಸ್ಥೆ ವತಿಯಿಂದ ಬುಧವಾರ ನಡೆದ ಅಣಕು ಪ್ರದರ್ಶನ ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ ಮಾತನಾಡಿ, ಪೆಟ್ರೊನೆಟ್ ಸಂಸ್ಥೆಯು ಅರಳ ಗ್ರಾಮ ಪಂಚಾಯಿತಿಗೆ ರೂ 7.5ಲಕ್ಷ ಮೊತ್ತದ ವಿವಿಧ ಮೂಲಭೂತ ಸೌಕರ್ಯ ಒದಗಿಸಿದೆ ಎಂದರು.

9btl-Arala
ಎಚ್‍ಪಿಸಿಎಲ್ ಸಂಸ್ಥೆ ಉಪ ಸಂಯೋಜಕ ಕ್ಷೀರಸಾಗರ್, ವ್ಯವಸ್ಥಾಪಕ ಪ್ರಪುಲ್ ರಂಗರಿಯಾ ಮತ್ತಿತರರು ಮಾತನಾಡಿ, ನಾಗರಿಕರು ಇಂತಹ ಜನಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚು ಪಾಲ್ಗೊಂಡಾಗ ಸಂಸ್ಥೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯುತ್ತದೆ ಎಂದರು.
ಇದೇ ವೇಳೆ ಪೈಪ್‍ಲೈನ್‍ಗೆ ಹಾನಿ ಬಗ್ಗೆ ಅಣಕು ಪ್ರದರ್ಶನ ಮತ್ತು ದುರಸ್ತಿ ಕಾರ್ಯ ಹಾಗೂ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಗ್ರಾಮಾಂತರ ಠಾಣೆ ಎಎಸೈ ಭಾಸ್ಕರ, ಅಗ್ನಿಶಾಮಕ ಠಾಣಾಧಿಕಾರಿ ಸುಂದರ್, ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಮ್ ರಾಜೇಶ್, ಕಂದಾಯ ನಿರೀಕ್ಷಕ ನವೀನ್ ಮತ್ತಿತರರು ಮಾತನಾಡಿದರು. ಅರಳ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀಧರ ಶೆಟ್ಟಿ, ಆಶ್ರಫ್, ಪೆಟ್ರೊನೆಟ್ ಅಧಿಕಾರಿಗಳಾದ ವಿವೇಕ್ ಹಾಸನ, ರವೀಂದ್ರ ನೆರಿಯಾ ಮತ್ತಿತರರು ಇದ್ದರು.
ಪೆಟ್ರೋನೆಟ್ ಸಂಸ್ಥೆ ಉಪ ವ್ಯವಸ್ಥಾಪಕ ಮಹೇಶ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ, ಮಂಗಳೂರಿನಿಂದ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಒಟ್ಟು 362 ಕಿ.ಮೀ.ಉದ್ದಕ್ಕೆ ಭೂಮಿಯ 10 ಅಡಿ ಆಳದಲ್ಲಿ ಸುಭದ್ರ ರೀತಿಯಲ್ಲಿ ಎಚ್‍ಪಿಸಿಎಲ್ ಸಂಸ್ಥೆ ಅನಿಲ (ಗ್ಯಾಸ್) ಮತ್ತು ಒಎನ್‍ಜಿಸಿ ಸಂಸ್ಥೆಯು ಡಿಸೇಲ್ ಮತ್ತಿತರ ಇಂಧನ ಸಾಗಾಟವನ್ನು ಪೈಪ್‍ಲೈನ್ ಮೂಲಕ ಯಶಸ್ವಿಯಾಗಿ ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಸ್ಥೆಯು ಲಾಭಾಂಶದಲ್ಲಿ ಶೇ.2ರಷ್ಟು ಅನುದಾನವನ್ನು ಸ್ಥಳೀಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿನಿಯೋಗಿಸುತ್ತಿದೆ ಎಂದು ಅವರು ವಿವರಿಸಿದರು.
—

By suddi9

Leave a Reply

Your email address will not be published. Required fields are marked *