ಬಂಟ್ವಾಳ: ಬರ ಪರಿಸ್ಥಿತಿ ನಿಭಾಯಿಸಲು ಆಡಳಿತ ಕ್ರಮ ಕೈಗೊಂಡಿದ್ದು, ಎಲ್ಲರೂ ಒಟ್ಟಿಗೆ ಶ್ರಮಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ಕೊರತೆಯಾಗದಂತೆ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಶ್ರಮಿಸಬೇಕು ಎಂದರು.
ಬಿ.ಸಿ.ರೋಡಿನಲ್ಲಿ ಈಗಿರುವ ತಾಲೂಕು ಪಂಚಾಯಿತಿ ಹಳೇ ಕಟ್ಟಡದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಪ್ರಸ್ತಾಪವನ್ನು ಸಚಿವ ರೈ ಮಂಡಿಸಿ, ಈ ಕುರಿತು ಗಮನಹರಿಸುವಂತೆ ತಾಪಂ ಇಒ ಸಿಪ್ರಿಯನ್ ಮಿರಾಂಡಾ ಅವರಲ್ಲಿ ಸೂಚಿಸಿದರು. ಸಾರ್ವಜನಿಕ ಸಹಭಾಗಿತ್ವದಲ್ಲಿ ಬಸ್ ನಿಲ್ದಾಣ ನಿರ್ಮಿಸಬಹುದು ಎಂದು ರೈ ಸಲಹೆ ನೀಡಿದರು.

13bh-kdp meeting
ಬಂಟ್ವಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಏನೇನು ಬೇಕು ಎಂಬ ಕುರಿತು ಪಟ್ಟಿ ಮಾಡುವಂತೆ ಸಚಿವ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ದೇವರಾಜ ಅರಸು ಭವನ ನಿರ್ಮಾಣ, ಎ.ಆರ್.ಟಿ.ಓ ಕಚೇರಿ ನಿರ್ಮಾಣಕ್ಕೆ ಜಾಗ ಗುರುತಿಸುವ ಬಗ್ಗೆ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಲ್ಲಿ ಚರ್ಚಿಸಿದರು.
ಗೂಡಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಇದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ದೂರಿದರು. ಈ ಸಂದರ್ಭ ಉತ್ತರಿಸಿದ ಅಧಿಕಾರಿ, ಸರಕಾರಿ ಸೌಲಭ್ಯಗಳ ಕೊರತೆ ಇಲಾಖೆಗಿದೆ ಎಂದು ಅಳಲು ತೋಡಿಕೊಂಡರು. ಬೆಂಜನಪದವು ಕಾಲೇಜು ಮುಂಭಾಗದಲ್ಲಿರುವ ಎಂಎಸ್‍ಐಎಲ್ ಮದ್ಯದಂಗಡಿಯಲ್ಲಿ ಚಿಲ್ಲರೆ ಮದ್ಯದ ಬಾಟಲಿಗಳು ವಿಕ್ರಯವಾಗುತ್ತಿದ್ದು, ಇದು ಶಾಲೆ, ಕಾಲೇಜು ಮಕ್ಕಳ ಕೈಗೆ ಸಿಗುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಚಂದ್ರಪ್ರಕಾಶ ಶೆಟ್ಟಿ ಕೋರಿದರು. ಸಜಿಪನಡು ಗ್ರಾಪಂನಲ್ಲಿ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿ ಗ್ರಾಮಸಭೆಯೇ ರದ್ದುಗೊಂಡ ವಿಚಾರವನ್ನು ಜಿಪಂ ಸದಸ್ಯ ರವೀಂದ್ರ ಕಂಬಳಿ ಪ್ರಸ್ತಾಪಿಸಿದರು.
ಆರ್ ಟಿ ಇ ಸಮಸ್ಯೆ
ಆರ್ ಟಿ ಇ ಕಾನೂನಿನಡಿ ಆನ್ ಲೈನ್ ನಲ್ಲಿ ವಿಟ್ಲ ಶಾಲೆ ವೀರಕಂಭದಲ್ಲಿದೆ ಎಂದು ಡಿಸ್ಪ್ಲೇ ಆಗುತ್ತದೆ ಎಂದು ಜಿಪಂ ಸದಸ್ಯೆ ಮಂಜುಳಾ ಮಾವೆ ಹೇಳಿದರು. ಆರ್ ಟಿಇಯಲ್ಲಿ ವಾರ್ಡ್ ಮತ್ತು ಪಿನ್ ಕೋಡ್ ವ್ಯತ್ಯಾಸ ಇರುವುದನ್ನು ಹೇಳಿದ ಬಿಇಒ ಲೋಕೇಶ್, ಸೇರ್ಪಡೆ ವಿಷಯದಲ್ಲಿ ಯಾವುದೇ ಶಾಲೆಗಳಲ್ಲೂ ಗೊಂದಲ ಇಲ್ಲ, ಎಲ್ಲರಿಂದಲೂ ಸಹಕಾರ ದೊರಕುತ್ತಿದೆ ಎಂದು ಮಾಹಿತಿ ನೀಡಿದರು.
ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರಾಜೇಶ್ ಬಾಳೆಕಲ್ಲು, ಉಮೇಶ್ ಬೋಳಂತೂರು ವಿವಿಧ ವಿಷಯ ಮಾತನಾಡಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *