ಬಂಟ್ವಾಳ: ಸರಕಾರದ ಸವಲತ್ತನ್ನು ಪಡೆಯಲು ಕಸ ವಿಲೇವಾರಿ ಗುತ್ತಿಗೆದಾರ ಅನಧಿಕೃತ ಕಾರ್ಮಿಕರ ಹೆಸರುಗಳ ಪಟ್ಟಿಯನ್ನು ಪುರಸಭೆಗೆ ಸಲ್ಲಿಸಿರುವ ಪ್ರಕರಣವೊಂದು ಗುರುವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಯಲಿಗೆ ಬಂದಿದೆ.
ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಅವರು ಈ ಪ್ರಕರಣವನ್ನು ಬಯಲಿಗೆ ಎಳೆದಿದ್ದು ಕಸ ವಿಲೇವಾರಿ ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಪುರಸಭೆಗೆ ಸಲ್ಲಿಸಿರುವ ಕಾರ್ಮಿಕರ ಹೆಸರಿನ ಪಟ್ಟಿ ಒಂದಾದರೆ ಅಧಿಕೃತವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರ ಹೆಸರೇ ಬೇರೆಯಾಗಿದೆ ಎಂದು ಕಾರ್ಮಿಕರ ಹೆಸರಿನ ಪಟ್ಟಿಯನ್ನು ಸಭೆಯ ಮುಂದಿಟ್ಟರು. ಮಾತ್ರವಲ್ಲದೆ ಎರಡು ಹೆಸರಿನ ಪಟ್ಟಿಯನ್ನು ಪರಿಶೀಲಿಸಿದಾಗ 36 ಕಾರ್ಮಿಕರ ಪೈಕಿ ಅಧಿಕೃತ ಪಟ್ಟಿಯಲ್ಲಿ ಹೆಸರಿಲ್ಲದೆ ಇರುವುದು ಸಭೆಯಲ್ಲಿ ಅಚ್ಚರಿಯನ್ನು ಮೂಡಿಸಿತು.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಂಗಳೂರು ನಗರ ವ್ಯಾಪ್ತಿಯ ವಿವಿಧ ಭಾಗದ ಕಾರ್ಮಿಕರ ಹೆಸರನ್ನು ಅನಧಿಕೃತವಾಗಿ ಉಲ್ಲೇಖಿಸಿರುವುದು ಈ ಅವ್ಯವಹಾರಕ್ಕೆ ಪುಷ್ಟಿ ನೀಡಿದಂತಿತ್ತು. ಪಿಂಚಣಿ, ಪಿಎಫ್ ಸೇರಿದಂತೆ ವಿವಿಧ ಸವಲತ್ತುಗಳು ನೈಜ್ಯ ಕಾರ್ಮಿಕರಿಗೆ ಸಿಗುತ್ತದೆ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದ ದೇವದಾಸ ಶೆಟ್ಟಿ ಇದರ ಸಮಗ್ರ ತನಿಖೆಗೆ ಒತ್ತಾಯಿಸಿದರಲ್ಲದೆ ಗುತ್ತಿಗೆದಾರ ಎಮ್ಮೆಕೆರೆ ಸಲಾಂ ಪಾವತಿಸಬೇಕಾಗಿರುವ ಬಾಕಿ ಮೂರು ತಿಂಗಳ ಬಿಲ್ಲನ್ನು ತಡೆಹಿಡಿಯುವಂತೆ ಆಗ್ರಹಿಸಿದರು.

ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಸ ವಿಲೇವಾರಿ ಬಿಲ್ಲನ್ನು ಒಂದೇ ತಿಂಗಳಲ್ಲಿ ಏಕ ಕಾಲಕ್ಕೆ ಪಾವತಿಸಿರುವ ಕ್ರಮವನ್ನು ಕೂಡಾ ಪ್ರಶ್ನಿಸಿದ ದೇವದಾಸ ಶೆಟ್ಟಿ ಸ್ಪಷ್ಟನೆ ಬಯಸಿದರು. ಈ ವಿಚಾರದಲ್ಲಿ ಕಾರ್ಮಿಕ ಇಲಾಖೆಗೆ ದೂರು ನೀಡಿದರೆ ಪುರಸಭೆಗೆ ಕಪ್ಪುಚುಕ್ಕೆಯಾಗಲಿದೆ. ಇದನ್ನು ಈ ಹಂತದಲ್ಲೇ ಸರಿಪಡಿಸುವಂತೆ ಆಗ್ರಹಿಸಿದರು. ಪ್ರಕರಣ ಬಯಳಿಗೆಳೆಯುತ್ತಿದ್ದ ಸಂದರ್ಭದಲ್ಲಿ ಇತರ ಸದಸ್ಯರಾಗಲೀ. ಅಧಿಕಾರಿಗಳಾಗಲೀ ಚಕಾರವೆತ್ತದೆ ಮೂಕಸ್ಮಿತರಾಗಿದ್ದರು. ಒಂದು ಹಂತದಲ್ಲಿ ಆಡಳಿತ ಪಕ್ಷದ ಸದಸ್ಯ ಶರೀಫ್ ಅವರು ಇದಕ್ಕೆ ದ್ವನಿಗೂಡಿಸಿದರು. ವಿಷಯದ ಗಂಭಿರತೆ ಅರಿತ ಮುಖ್ಯಾಧಿಕಾರಿ ಸುಧಾಕರ್ ಅವರು ಮಧ್ಯೆ ಪ್ರವೇಶಿಸಿ ಗುತ್ತಿಗೆದಾರನಿಗೆ ಕಾರ್ಮಿಕರ ಪಟ್ಟಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರು ನೀಡಿಲ್ಲ. ಇದೇ ತಿಂಗಳ 22ರಂದು ಕಸ ವಿಲೇವಾರಿಗೆ ಸಂಬಂಧಿಸಿ ಹೊಸ ಟೆಂಡರ್ ಕರೆಯಲಾಗುತ್ತಿದೆ. ಮುಂದಿನ ದಿನದಲ್ಲಿ ಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಲಾಗುವುದು. ಅದುವರೆಗೆ ಬಿಲ್ಲನ್ನು ತಡೆಹಿಡಿಯುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.
ಬಜೇಟ್ಗೆ ಮಂಜೂರಾತಿ: ಕಳೆದ ಬಾರಿಯ ಬಜೆಟ್ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಆಯವ್ಯಯದ ಅಂಕಿ ಅಂಶದ ಲೆಕ್ಕಗಳು ಸಮರ್ಪಕವಾಗಿ ತಾಳೆಯಾಗದೇ ಇರುವ ವಿಚಾರವನ್ನು ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಮತ್ತೆ ಸಭೆಯ ಗಮನಕ್ಕೆ ತಂದರು. ಈ ಬಾರಿ ಬಜೆಟ್ ಅನ್ನು ಸ್ಥಿರೀಕರಣ ಮಾಡುವುದಾದರೆ ಅಂಕಿ ಅಂಶಗಳಲ್ಲಿನ ವ್ಯತ್ಯಾಸಕ್ಕೆ ಸಕಾರಣ ನೀಡಬೇಕೆಂದು ಒತ್ತಾಯಿಸಿದರು.
ಆಯವ್ಯಯದಲ್ಲಿ ಜಮೆ ಮತ್ತು ಖರ್ಚಿಗೂ ಸುಮಾರು 4 ಕೋಟಿ ರೂ. ವ್ಯತ್ಯಾಸ ಕಂಡುಬರುತ್ತಿದೆ. ಈ ಕುರಿತು ಜಿಲ್ಲಾಕಾರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಯ ಲೆಕ್ಕಾಧೀಕ್ಷಕರಿಗೆ ಜಿಲ್ಲಾಧಿಕಾರಿಯವರು ತನಿಖೆಗೆ ಅದೇಶಿಸಿದ್ದಾರೆ. ಈ ಹಂತದಲ್ಲಿ ಬಜೆಟ್ ಅನ್ನು ವ್ಯತ್ಯಾಸ ಸರಿಪಡಿಸದೆ ಸ್ಥಿರೀಕರಣ ಮಾಡಬಾರದು ಎಂದು ಪಟ್ಟು ಹಿಡಿದರು. ಒಂದು ವೇಳೆ ಬಹುಮತದಿಂದ ಸ್ಥಿರೀಕರಣ ಮಾಡಿದರೆ, ಮತ್ತೆ ಲೆಕ್ಕಪತ್ರದಲ್ಲಾಗುವ ಸಮಸ್ಯೆ ಮತ್ತು ಸಿಬ್ಬಂದಿಗಳಿಗೆ ವೇತನ ನೀಡಲಾಗದ ತೊಂದರೆಯಾದರೆ ಪುರಸಭೆಯೇ ಹೊಣೆ ಎಂದು ತಿಳಿಸಿದ ಅವರು ಬಜೆಟ್ ಮಂಜೂರಾತಿಗೆ ವಿಪಕ್ಷ ಸದಸ್ಯರ ಲಿಖಿತ ಆಕ್ಷೇಪ ಸಲ್ಲಿಸಿದರು. ಇತ್ತ ಬಹುಮತದಿಂದ ಬಜೇಟ್ ಅನನು ಮಂಜೂರಾತಿಗೊಳಿಸಲಾಯಿತು.
ಆಡಳಿತ ಸದಸ್ಯ ಗರಂ: ಕುಡಿಯುವ ನೀರಿನ ಸಹಿತ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ನೀಡಲಾದ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಡಳಿತ ಪಕ್ಷದ ಸದಸ್ಯ ವಾಸು ಪೂಜಾರಿ ಗರಂ ಆದರು. ಬರ ಪರಿಸ್ಥಿತಿ ಅಂತ ಈ ಸಂದರ್ಭದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ತರ್ತು ಸ್ಪಂದನ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಇದೇ ರೀತಿ ನಡೆದುಕೊಂಡರೆ ತಾನಿಲ್ಲಿ ಧರಣಿ ನಡೆಸಬೇಕಾದಿತ್ತು ಎಂದು ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ಸಭೆ ಮುಗಿದಾಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೆಯುಡಯ್ಲ್ಯುಎಸ್ ವಿರುದ್ಧ ಆಕ್ರೋಶ: ಕೆಯುಡಯ್ಲ್ಯುಎಸ್ನ ಕಾರ್ಯವೈಖರಿಯ ಬಗ್ಗೆ ಸದಸ್ಯರು ಪಕ್ಷ ಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು. ಪೈಪ್ಲೈನ್ ಅಳವಡಿಕೆಯ ಬಳಿಕ ರಸ್ತೆಯನ್ನು ಅಗೆದು ಅಲ್ಲೇ ಬಿಟ್ಟಿರುವುದು ಮತ್ತು ಬಿ.ಸಿ.ರೋಡ್ ಸಹಿತ ಎಲ್ಲೆಡೆ ಧೂಳು ಆವರಿಸುವುದರಿಂದ ಸಾರ್ವಜನಿಕರು ಸಮಸ್ಯೆಗೆ ಒಳಗಾಗಿದ್ದಾರೆ. ಕಾಮಗಾರಿ ಸಂದರ್ಭ ಎಲ್ಲೆಲ್ಲಿ ಹೊಂಡ ತೆಗೆದಿದ್ದೀರಿ ಎಂದು ನೋಡಿದ್ದೀರಾ, ನೀವು ಇಷ್ಟರವರೆಗೆ ಎಷ್ಟು ಕೆಲಸ ಮಾಡಿದ್ದೀರಿ ಎಂಬುದನ್ನು ಮರುಪರಿಶೀಲನೆ ಮಾಡಿದ್ದೀರಾ. ನಿಮ್ಮ ಕಾರ್ಯವೈಖರಿಯಿಂದ ಪುರಸಭೆ ಸಾರ್ವಜನಿಕರಿಂದ ನಿಂದನೆಯ ಮಾತು ಕೇಳುವಂತಾಗಿದೆ ಎಂದು ಸದಸ್ಯ ಶರೀಫ್ ಅವರು ಅಸಮಾಧಾನ ವ್ಯಕ್ತಪಡಿಸಿದರೆ ನಿಮ್ಮ ಕೆಲಸವಾಗುವವರೆಗೆ ನಮ್ಮಲ್ಲಿ ನಯವಿನಯದಿಂದ ವರ್ತಿಸುತ್ತೀರಿ. ಬಳಿಕ ಅರ್ಧಂಬರ್ಧ ಕೆಲಸ ಮಾಡಿ ತೆರಳುತ್ತೀರಿ. ತದ ನಂತರ ಅದರ ದುರಸ್ಥಿಗೆ ನಾವು ನಿಮ್ಮ ಬೆನ್ನು ಹತ್ತಬೇಕಾಗುತ್ತದೆ. ನೀವು ನಮ್ಮ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸುತ್ತೀರಿ ಎಂದು ಸದಸ್ಯ ಇಕ್ಬಾಲ್ ಗೂಡಿನಬಳಿ ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಯುಡಯ್ಲ್ಯುಎಸ್ ಅಧಿಕಾರಿಣಿ ಶೋಭಾ ಲಕ್ಷ್ಮಿ ಅವರು ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೆ ಎರಡನೆ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮಾರ್ಚ್ ಅಂತ್ಯಕ್ಕೆ ಪ್ರಯೋಗಿಕವಾಗಿ ನೀರು ಪೂರೈಸಲಾಗುದೆಂದು ಆಶ್ವಾಸನೆ ನೀಡಿದರು.
ಅಂಗನವಾಡಿ ಕಟ್ಟಡಕ್ಕೆ ನೀರು ಪೂರೈಕೆಗೆ ಏನಾದರೂ ಮಾನದಂಡಗಳು ಇವೆಯೇ ಎಂದು ಸದಸ್ಯೆ ಚಂಚಲಾಕ್ಷಿ ಪ್ರಶ್ನಿಸಿದರು.
ನೀರು ಎಲ್ಲಿಂದ ಎಲ್ಲಿಗೆ ಪೂರೈಕೆ ಆರಂಭಿಸಬೇಕು ಎಂಬ ಬಗ್ಗೆಯೂ ವಾಗ್ವಾದ ನಡೆಯಿತು. ಬಿ.ಮೂಡದಿಂದ ಮೊದಲೋ ಅಥವಾ ಬಂಟ್ವಾಳದಿಂದ ಮೊದಲೋ ಎಂಬ ಕುರಿತು ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಮತ್ತು ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ ಮಾತಿನ ಚಕಮಕಿ ನಡೆಸಿದರು. ನೀರಿನ ವಿಷಯದಲ್ಲಿ ತಾರತಮ್ಯ ಮಾಡಬೇಡಿ ಎಂದು ವಸಂತಿ ಚಂದಪ್ಪ ಆಕ್ಷೇಪಿಸಿದರು.
ಪ್ರಭು ಬಹಿಷ್ಕಾರ: ಸಾಮಾನ್ಯ ಸಭೆಯ ನೋಟಿಸನ್ನು ಸದಸ್ಯರಿಗೆ 7 ದಿನಗಳ ಮುಂಚಿತವಾಗಿ ಜಾರಿಗೊಳಿಸಬೇಕಾಗಿದ್ದು ಹಿರಿಯ ಸದಸ್ಯ ಗೋವಿಂದ ಪ್ರಭು ಅವರಿಗೆ ನಿಗದಿತ ಅವಧಿಯಲ್ಲಿ ಸಾಮಾನ್ಯ ಸಭೆಯ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಅವರು ಲಿಖಿತ ಆಕ್ಷೇಪ ಸಲ್ಲಿಸಿ ಸಭೆಯನ್ನು ಬಹಿಷ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ಸದಸ್ಯರಾದ ಪ್ರವೀಣ್ ಬಿ., ಗಂಗಾಧರ ಪೂಜಾರಿ, ಜಗದೀಶ್ ಕುಂದರ್, ಮೋಹನ್ ಬಿ., ಮುನೀಶ್ ಅಲಿ, ಸುಗುಣಕಿಣಿ, ಜಸಿಂತ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ಸಮುದಾಯಾಧಿಕಾರಿ ಮತ್ತಡಿ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಿಬ್ಬಂದಿ ರಝಾಕ್, ಮುಖ್ಯಾಧಿಕಾರಿ ಸುಧಾಕರ್ ಅವರು ಹಾಜರಿದ್ದರು.