ಬಂಟ್ವಾಳ:ಸರ್ವಶಕ್ತನಾದ ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಬೇಕೆಂದು ಪವಿತ್ರ ಕುರ್ಆನ್ ಸೂಕ್ತದಂತೆ ,ಪವಿತ್ರ ಕುರ್ಆನ್ ಮತ್ತು ಪ್ರವಾದಿ ಸುನ್ನತ್ಗಳೆಂಬ ಪಾಶವನ್ನು ಹಿಡಿದು ಒಗ್ಗಟ್ಟಾದರೆ ಮುಸ್ಲಿಂ ಸಮುದಾಯ ಉತ್ತಮ ಸಮುದಾಯವಾಗಲು ಸಾಧ್ಯವಿದೆ ಎಂದು ಖ್ಯಾತ ವಾಗ್ಮಿ ಜನಾಬ್ ಅಲಿ ಉಮರ್ ಅವರು ಹೇಳಿದರು.

ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಹಮ್ಮಿಕೊಂಡಿರುವ ಕುರ್ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ, ಬಿ.ಸಿ.ರೋಡ್ ಸಮೀಪದ ಕೈಕಂಬದ ಪೂಂಜಾ ಮೈದಾನದಲ್ಲಿ ಜರಗಿದ ಧಾರ್ಮಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ಹಿರಿಯ ವಿದ್ವಾಂಸ ಚುಯಿಲಿ ಅಬ್ದುಲ್ಲಾ ಮುಸ್ಲಿಯಾರ್ರವರು ಲಾಇಲಾಹ ಇಲ್ಲಲ್ಲಾಹ್ ಎಂಬ ವಿಷಯವಾಗಿ ಪ್ರವಚನ ನೀಡಿದರು.
ಸಲಫಿ ಮೂಮೆಂಟ್ನ ಕೇಂದ್ರ ಅಧ್ಯಕ್ಷರು ಯು.ಎನ್.ಅಬ್ದುರ್ರಝಾಕ್ರವರು ಸಮಾವೇಶದ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೆ.ಡಿ.ಎಸ್. ಮುಖಂಡ ಪಿ.ಎಮ್.ರಹೀಮ್ ಬಿ.ಸಿ.ರೋಡ್, ಸಾಮಾಜಿಕ ಮುಂದಾಳು ಅಬ್ದುಲ್ ಜಬ್ಬಾರ್ ಮಾರಿಪಳ್ಳ, ಮುಂತಾದವರು ಮುಖ್ಯ ಅತಿಥಿಗಳಿದ್ದರು.
ಎಸ್.ಕೆ.ಎಸ್.ಮ್ ಯೂತ್ವಿಂಗ್ನ ಅಧ್ಯಕ್ಷರು ಶಿಹಾಬ್ ತಲಪಾಡಿ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
