ಒಂದೆಡೆ ಕೆ ಯು ಡಬ್ಲ್ಯುಎಸ್ ಅವರಿಂದ ಇಡೀ ಬಂಟ್ವಾಳ ಪುರಸಭೆಗೆ ನೀರುಣಿಸಲು ನಡೆಸಲಾಗುತ್ತಿರುವ ಪೈಪ್ ಅಳವಡಿಕೆ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಹೊಂಡಗಳನ್ನು ಅಗೆದು ಪೈಪ್ ಅಳವಡಿಸಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆ ಸರ್ವೀಸ್ ರಸ್ತೆಯ ಪಕ್ಕವೇ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ರಸ್ತೆ ಅಗೆದು ಅಲ್ಲಿ ಕಾಂಕ್ರೀಟ್ ಹಾಕುವ ಕಾರ್ಯ. ಈ ಕೆಲಸಗಳು ರಭಸದಿಂದ ನಡೆಯುತ್ತಿದ್ದಂತೆಯೇ ಇವುಗಳ ಪಶ್ಚಾತ್ ಪರಿಣಾಮವೋ ಎಂಬಂತೆ ಬಿಎಸ್ಸೆನ್ನೆಲ್ ಲೈನ್ ಕಟ್ ಆಗುವುದು, ಇನ್ನಿತರ ಕೇಬಲ್ ತುಂಡಾಗುವುದು, ಅದಕ್ಕಾಗಿ ದೊಡ್ಡದಾದ ಜೆಸಿಬಿ ಬಂದು ರಸ್ತೆಯನ್ನು ಅಗೆಯುವುದು ನಡೆಯುತ್ತಿದೆ. ಕಳೆದೊಂದು ತಿಂಗಳಿಂದ ಬಿ.ಸಿ.ರೋಡ್ ಪೇಟೆಯಲ್ಲಿ ನಡೆಯುತ್ತಿರುವ ಈ ಕೆಲಸ ಈಗ ಪರಾಕಾಷ್ಠೆಗೆ ತಲುಪಿದೆ. ಶನಿವಾರ ಈ ಕಾಮಗಾರಿ ಬಿ.ಸಿ.ರೋಡ್ ಪೇಟೆ ಜಂಕ್ಷನ್ ಎಂದೇ ಕರೆಯಲಾಗುವ ಫ್ಲೈಓವರ್ ಕೆಳಗಿನ ಭಾಗವಾದ ರಕ್ತೇಶ್ವರಿ ದೇವಸ್ಥಾನ, ತಾಲೂಕು ಕಚೇರಿ ಕಡೆಗಳಿಗೆ ತೆರಳುವ ರಸ್ತೆಯ ಸನಿಹ ಜೆಸಿಬಿ ಘರ್ಜನೆ ಕಂಡುಬಂತು. 1 (1)

4

5

3 (2)

6
ಇನ್ನು ಮುಂದಕ್ಕೆ ಎಲ್ಲಿಗೆ:
ಪೈಪ್ ಕಾಮಗಾರಿ ಶನಿವಾರ ಪದ್ಮಾ ಕಾಂಪ್ಲೆಕ್ಸ್ ಪಕ್ಕ ನಡೆಯುತ್ತಿದ್ದರೆ, ಇನ್ನು ಮುಂದಕ್ಕೆ ಸರ್ವೀಸ್ ರಸ್ತೆಗುಂಟ ಸಾಗಿ ಫ್ಲೈಓವರ್ ಆದಿಯವರೆಗೆ ಹೋಗಿ, ಅಲ್ಲಿಂದ ಗೂಡಿನಬಳಿ ಕಡೆಗೆ ಅಳವಡಿಸಲಾದ ಪೈಪ್ ವರೆಗೆ ಸಾಗುತ್ತದೆ. ಅಷ್ಟು ಕೆಲಸಗಳು ನಡೆಯಬೇಕು ಎಂದಿದ್ದರೆ ಕನಿಷ್ಠ ಹತ್ತು ದಿನಗಳಾದರೂ ಬೇಕು ಎನ್ನುತ್ತಾರೆ ಎಂಜಿನಿಯರ್ ಶುಭಲಕ್ಷ್ಮೀ. ಈಗ ಕಾಂಕ್ರೀಟ್ ಹಾಕಿ ಚರಂಡಿ ಕೆಲಸ ನಡೆಸಲಾಗುತ್ತದೆ. ಇದನ್ನು ಮುಗಿಸಲು ಕನಿಷ್ಠ 15 ದಿನಗಳು ಬೇಕು ಎನ್ನುತ್ತಾರೆ ಎನ್.ಎಚ್.ಎ.ಐ. ಇಂಜಿನಿಯರ್ ಅಜಿತ್.
ಹೀಗಾಗಿ ಅಗೆಯುವ ಪ್ರಧಾನ ಕೆಲಸ ಇನ್ನೂ ಹದಿನೈದು ದಿನ ನಡೆಯುತ್ತದೆ ಅಂದಂತಾಯಿತು.
ಏನು ತೊಂದರೆ:
ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಅಕಾರಿಗಳು ಹೇಳುತ್ತಿದ್ದರೂ ಸದ್ಯಕ್ಕಂತೂ ಧೂಳಿನ ಜೊತೆಗೆ ಟ್ರಾಫಿಕ್ ಸಮಸ್ಯೆಯೊಂದು ಹೆಚ್ಚುವರಿಯಾಗಿ ಬಿ.ಸಿ.ರೋಡ್ ಗೆ ಸೇರ್ಪಡೆಯಾಗಿದೆ. ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಪೇಟೆಯಾಗಿ ಸಾಗಿ, ನಾರಾಯಣಗುರು ವೃತ್ತದ ಕಡೆಗೆ ಹೋಗುವ ಏಕಮುಖ ಸಂಚಾರದ ದ್ವಿಪಥ ಹೆದ್ದಾರಿಯಲ್ಲೀಗ ವಿರುದ್ಧ ದಿಕ್ಕಿನಿಂದ ವಾಹನಗಳು ದಿಢೀರನೆ ಬರಲಾರಂಭಿಸಿವೆ. ಇದಕ್ಕೆ ಕಾರಣ ಸರ್ವೀಸ್ ರೋಡ್ ನ ಒಂದು ಪಾರ್ಶ್ವವನ್ನು ಬಂದ್ ಮಾಡಿರುವುದು. ಹೀಗಾಗಿ ಬಿ.ಸಿ.ರೋಡ್ ಪೇಟೆಯಿಂದ ಮಂಗಳೂರಿಗೆ ತೆರಳುವ ವಾಹನಗಳು ಬಸ್ಸುಗಳೂ ಸೇರಿದಂತೆ ಫ್ಲೈಓವರ್ ನಿಂದ ದ್ವಿಪಥ ರಸ್ತೆಯಲ್ಲಿ ರಾಂಗ್ ಸೈಡ್ ನಲ್ಲಿ ಸಾಗಿ ಪೆÇೀಸ್ಟ್ ಆಫೀಸ್ ತಿರುಗುವ ರಸ್ತೆ ಪಕ್ಕ ಕಡಿದು ಹಾಕಲಾದ ಡಿವೈಡರ್ ನ ಜಾಗದಲ್ಲಿ ಹೆದ್ದಾರಿಯ ಸರಿಯಾದ ಮಾರ್ಗವನ್ನು ಸೇರಬೇಕು. ಪೀಕ್ ಅವರ್ ನಲ್ಲಿ ವಾಹನ ದಟ್ಟಣೆ ಅಕವಿರುವ ಸಂದರ್ಭವಂತೂ ಇದು ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ. ಈ ಕುರಿತು ಸರಿಯಾದ ಮಾಹಿತಿ, ಮಾರ್ಗದರ್ಶನ ಇಲ್ಲದ ಕಾರಣ, ಮಂಗಳೂರು ಕಡೆಯಿಂದ ರಸ್ತೆಯ ಎರಡೂ ಬದಿ ಬರುವ ವಾಹನಗಳಿಗೆ ಎದುರಿನಿಂದ ವಾಹನಗಳು ಕಾಣಸಿಗುವಾಗ ಗಲಿಬಿಲಿ ಹೊಂದಿ ಅಪಘಾತಗಳಿಗೆ ಕಾರಣವಾಗುತ್ತದೆ. ಈಗಾಗಲೇ ಸಣ್ಣಪುಟ್ಟ ಅಪಘಾತಗಳು, ವಾಹನ ಸವಾರರ ನಡುವೆ ಜಗಳಗಳು ಸಂಭವಿಸಿವೆ. ಅದೇ ರೀತಿ ಫ್ಲೈಓವರ್ ನಿಂದ ಮಂಗಳೂರು ಕಡೆಗೆ ಇಳಿಯುವ ವಾಹನಗಳಿಗೆ ಬಲದಿಂದ ಎಡಕ್ಕೆ ರಸ್ತೆಗೆ ನುಗ್ಗುವ ವಾಹನಗಳು ಅಡ್ಡವಾಗಿ ಸಿಕ್ಕಿ ಮತ್ತಷ್ಟು ಅಪಘಾತಕ್ಕೆ ಕಾರಣವಾಗುತ್ತಿವೆ.
ಕಳೆದ ಪುರಸಭೆ ಮೀಟಿಂಗ್ ನುದ್ದಕ್ಕೂ ರಸ್ತೆ ಅಗೆದು ಹೊಂಡಗಳನ್ನು ಇನ್ನೂ ಮುಚ್ಚಲಾಗಿಲ್ಲ ಎಂಬ ಚರ್ಚೆ ನಡೆದಿತ್ತು. ಈಗಲೂ ಅಲ್ಲಲ್ಲಿ ಹೊಂಡಗಳನ್ನು ಮಾಡಿ ಮುಚ್ಚಲಾಗಿಲ್ಲ. ಅರ್ಧಂಬರ್ಧ ಕೆಲಸಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ.
ಏನಾಗಬೇಕು:
ತುರ್ತಾಗಿ ಆಗಬೇಕಿರುವುದು ವಾಹನ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ. ಹಾಗೂ ವಾಹನಗಳು ಯಾವ ದಿಕ್ಕಿನಲ್ಲಿ ಸಾಗಬೇಕು, ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳಿಗೆ ಎದುರು ವಾಹನಗಳು ಬರುತ್ತಿವೆ ಎಂಬ ಮಾರ್ಗದರ್ಶನ ನೀಡುವ ಸಿಬ್ಬಂದಿ ಆಯಕಟ್ಟಿನ ಜಾಗದಲ್ಲಿ ನಿಲ್ಲುವ ಅವಶ್ಯಕತೆ ಇದೆ.

By suddi9

Leave a Reply

Your email address will not be published. Required fields are marked *