ರೂ 5ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಸಚಿವ ರೈ
ಬಂಟ್ವಾಳ: ಅರಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಒಟ್ಟು ರೂ 5ಕೋಟಿ ಮೊತ್ತದ ಅನುದಾನ ವಿನಿಯೋಗಿಸಲಾಗಿದ್ದು, ಇಲ್ಲಿನ ಮುಲ್ಲಾರಪಟ್ನ ಸಮೀಪದ ತೂಗುಸೇತುವೆ ಬಳಿ ಕೃಷಿಕರ ಅನುಕೂಲ ಮತ್ತು ಅಂತರ್ಜಲ ವೃದ್ಧಿಗೆ ರೂ 4.85ಕೋಟಿ ವೆಚ್ಚದ ಹೊಸ ಅಣೆಕಟ್ಟೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನಲ್ಲಿ ನೂತನವಾಗಿ ಅಸ್ತಿತ್ವಗೊಂಡ ಅರಳ ಗ್ರಾಮ ಪಂಚಾಯಿತಿ ವತಿಯಿಂದ ಎರ್ಮಾಳ್ ಎಂಬಲ್ಲಿ ಸೋಮವಾರ ಏರ್ಪಡಿಸಿದ್ದ ಉದ್ಯೋಗ ಖಾತರಿ ಯೋಜನೆಯಡಿ ರೂ 19ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ರಾಜೀವ ಗಾಂಧಿ ಸೇವಾ ಕೇಂದ್ರ’ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಅರಳ ಗ್ರಾಮ ಸೇರಿದಂತೆ ಒಟ್ಟು 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಸಂಗಬೆಟ್ಟು ಎಂಬಲ್ಲಿರೂ 36ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇಲ್ಲಿನ ಅಣ್ಣಳಿಕೆ-ಅರಳ -ಕರ್ಪೆ ಸಂಪರ್ಕ ರಸ್ತೆ ಸಂಪೂರ್ಣ ಡಾಂಬರೀಕರಣಗೊಳಿಸಲಾಗಿದೆ.

ಕೇಂದ್ರ ರಸ್ತೆನಿಧಿ ಯೋಜನೆಯಡಿ ಅಣ್ಣಳಿಕೆ-ಕರಿಮಲೆ-ವಾಮದಪದವು ರಸ್ತೆ ಸಂಪೂರ್ಣ ಡಾಂಬರೀಕರಣಗೊಳ್ಳಲಿದ್ದು, ಇಲ್ಲಿನ ಕಲ್ಪನೆ- ಅರಳ -ಶುಂಠಿಹಿತ್ಲು ರಸ್ತೆ ಅಭಿವೃದ್ಧಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೂ 3 ಕೋಟಿ, ಮುಲ್ಲಾರಪಟ್ನ-ಬಡಗಬೆಳ್ಳೂರು ಸಂಪರ್ಕ ಸೇತುವೆಗೆ 1 ಕೋಟಿ, ಅರಳ ಪರಿಶಿಷ್ಟ ಜಾತಿ ಪಂಗಡ ಕಾಲನಿ ರಸ್ತೆ ಅಭಿವೃದ್ಧಿಗೆ ರೂ 1 ಕೋಟಿ ಮೊತ್ತದ ಅನುದಾನ ವಿನಿಯೋಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ರೂ 1ಕೋಟಿ ವೆಚ್ಚದಲ್ಲಿ ಭಂಡಾರಿಬೆಟ್ಟು-ಜಕ್ರಿಬೆಟ್ಟು ರಸ್ತೆ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮ ಪಂಚಾಯಿತಿಯು ಸ್ಥಳೀಯ ಜನರಿಗೆ ಸರ್ಕಾರವಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಹಣಕಾಸು ಒದಗಿಸುವ ಮಹತ್ತರ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕಿದೆ ಎಂದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಮಾಸಿಕ ರೂ 12 ಸಾವಿರ ಮೊತ್ತದ ಕನಿಷ್ಠ ವೇತನ ಸಿಗಬೇಕು ಎಂದು ಆಗ್ರಹಿಸಿದರು.
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ. ಬಂಗೇರ, ಸದಸ್ಯೆ ಮಂಜುಳಾ ಸದಾನಂದ, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಂಗಮ್ಮ, ಸದಸ್ಯರಾದ ಎಂ.ಬಿ.ಅಶ್ರಫ್, ರಂಜಿನಿ ನಾಯ್ಕ, ಜೈನಾಬ್, ಲಕ್ಷ್ಮೀಧರ ಪೂಜಾರಿ, ಕಲ್ಯಾಣಿ, ಎಂಜಿನಿಯರ್ ಜಗದೀಶ್ ನಿಂಬಾಳ್ಕರ್ ಮತ್ತಿತರರು ಇದ್ದರು.
ಇದೇ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಯ್ಲೆಟ್ ಮಿನೇಜಸ್ ಮತ್ತು ಗುತ್ತಿಗೆದಾರ ರಂಜನ್ ಕುಮಾರ್ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ್ ಆಳ್ವ ಸ್ವಾಗತಿಸಿದರು. ಪಿಡಿಒ ವಾಯ್ಲೆಟ್ ಮಿನೇಜಸ್ ವರದಿ ವಾಚಿಸಿದರು. ಸದಸ್ಯ ಲಕ್ಷ್ಮೀಧರ ಶೆಟ್ಟಿ ಮಧ್ಯಾಳ ವಂದಿಸಿದರು. ಸದಸ್ಯ ಡೊಂಬಯ್ಯ ಬಿ.ಅರಳ ಕಾರ್ಯಕ್ರಮ ನಿರೂಪಿಸಿದರು.
—