ಬಂಟ್ವಾಳ : ಖಾಸಗಿ ಬೃಹತ್ ಕಟ್ಟಡವೊಂದರ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ಮಣ್ಣು ಅಗೆದ ಪರಿಣಾಮ ಬಿ.ಸಿ.ರೋಡ್ ಕೈಕಂಬದಿಂದ ಮದ್ದಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ. ಮುಂಬೈ ಮೂಲದ ವ್ಯಕ್ತಿಯೊಬ್ಬರ ಮಾಲಕತ್ವದ ಬೃಹತ್ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಕೈಕಂಬದಿಂದ ಮದ್ದಕ್ಕೆ ಸಂಚಾರಿಸುವ ರಸ್ತೆಗೆ ತಾಗಿಕೊಂಡು ಕಳೆದ ಎರಡು ವರ್ಷದಿಂದ ನಡೆಯುತ್ತಿದೆ. ಕಟ್ಟಡದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆಂದು ರಸ್ತೆ ಬದಿಯ ಮಣ್ಣನ್ನು ಅಗೆಯಲಾಗಿದ್ದು ಇದೀಗ ಸೋಮವಾರ ಮತ್ತು ಮಂಗಳವಾರ ಸುರಿದ ಭಾರೀ ಮಳೆಗೆ ಮಣ್ಣು ಕುಸಿದಿದ್ದು ಕಾಂಕ್ರಿಟ್ ರಸ್ತೆ ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

2
ಕಾಂಕ್ರಿಟ್ ರಸ್ತೆಯ ಅಡಿ ಭಾಗದಿಂದಲೇ ಮಣ್ಣು ಕುಸಿದಿರುವುದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಯ ಬದಿಯಲ್ಲಿ ಚರಂಡಿಯೂ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯ ಬದಿಯಲ್ಲಿ ಇಂಗುವುದರಿಂದ ಇನ್ನಷ್ಟು ಮಣ್ಣು ಕುಸಿದು ಬೀಳುವ ಅಪಾಯವಿದೆ. ಕೂಡಲೇ ತಡೆಗೋಡೆ ನಿರ್ಮಿಸದಿದ್ದರೆ ರಸ್ತೆ ಸಂಪೂರ್ಣವಾಗಿ ಧರೆಗುರುಳುವ ಸಂಭವವಿದೆ.
ಮಣ್ಣು ಕುಸಿತದಿಂದ ರಸ್ತೆ ಅಪಾಯದ ಪರಿಸ್ಥಿತಿಯಲ್ಲಿರುವುದರಿಂದ ಬುಧವಾರ ಬೆಳಗ್ಗೆ ಸ್ಥಳದಲ್ಲಿ ಸ್ಥಳೀಯ ನಾಗರಿಕರು ಜಮಾಯಿಸಿ ಕಟ್ಟಡ ಮಾಲಕರ ಅಜ್ಞಾನಿಕ ಹಾಗೂ ನಿಯಮ ಬಾಹಿರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ರಸ್ತೆಗೆ ತಾಗಿಕೊಂಡು ಸುಮಾರು 20 ಅಡಿ ಅಗೆಯುವುದರ ಬಗ್ಗೆ ಈ ಹಿಂದೆಯೇ ಪುರಸಭೆಗೆ ದೂರು ನೀಡಲಾಗಿತ್ತು. ಆದರೆ ಪುರಸಭೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ಮಣ್ಣು ಕುಸಿತದಿಂದ ರಸ್ತೆ ಮಾತ್ರವಲ್ಲದೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು ಕೂಡಾ ಧರೆಗುರುಳುವ ಅಪಾಯದಲ್ಲಿದೆ. ಈ ರಸ್ತೆಯಲ್ಲಿ ದಿನವಿಡೀ ಈ ಭಾಗದ ನಾಗರಿಕರ ವಾಹನಗಳು ಹಾಗೂ ಶಾಲಾ ವಾಹನಗಳು ಸಂಚಾರಿಸುತ್ತದೆ. ಕೂಡಲೇ ಪುರಸಭಾ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ತಡೆಗೋಡೆ ನಿರ್ಮಿಸುವ ಮೂಲಕ ರಸ್ತೆಯನ್ನು ಉಳಿಸಬೇಕು. ಅಲ್ಲದೆ ಸಂಭವನೀಯ ಅವಘಡವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಕ್ರಿಟ್ ರಸ್ತೆಯ ಮಧ್ಯ ಭಾಗದಿಂದ ಎಡಕ್ಕೆ ಮತ್ತು ಬಲಕ್ಕೆ 3.75 ಮೀಟರ್‍ನಂತೆ ಒಟ್ಟು 7 ಮೀಟರ್ ಜಾಗ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಿಸಬೇಕು. ರಸ್ತೆ ಬದಿಯನ್ನು ಅಗೆಯುವಾಗ ಮುಂಜಾಗೃತ ಕ್ರಮವನ್ನು ವಹಿಸಬೇಕು ಮತ್ತು ರಸ್ತೆ ಬದಿ ಕಾಂಪೌಂಡ್ ನಿರ್ಮಿಸುವಾಗ ಪುರಸಭೆಯಿಂದ ಅನುಮತಿ ಪಡೆಯಬೇಕು. ರಸ್ತೆಯ ಮೀಟರ್ ಅಂತರದಲ್ಲಿ ನಿಯಮ ಉಲ್ಲಂಘನೆಯಾಗಿದೆ ಮತ್ತು ರಸ್ತೆ ಬದಿ ಅಗೆಯಲು ಅನುಮತಿಯೂ ಪಡೆಯದೆ, ಮುಂಜಾಗೃತ ಕ್ರಮಗಳನ್ನೂ ಪಾಲಿಸಿಲ್ಲ ಎಂದು ಸ್ಥಳೀಯರಿಂದ ದೂರುಗಳು ಬಂದಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕಟ್ಟಡ ಮಾಲಕರಲ್ಲಿ ವಿವರ ಪಡೆಯಲಾಗುವುದು. ನಿಯಮ ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು.

*– ಸುಧಾಕರ್, ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ

ಬಿ.ಸಿ.ರೋಡ್ ಕೈಕಂಬದಿಂದ ಮದ್ದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಲ ಬದಿಯಲ್ಲಿ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷದಿಂದ ನಡೆಯುತ್ತಿದ್ದು ಕಟ್ಟಡ ನಿರ್ಮಾಣಕ್ಕಾಗಿ ಮದ್ದ ಕಾಂಕ್ರೆಟ್ ರಸ್ತೆಯಿಂದ ಸುಮಾರು 20 ಅಡಿಯಷ್ಟು ಕೆಳಗೆ ಅಗೆದು ಹೊಂಡ ನಿರ್ಮಿಸಲಾಗಿದೆ. ಕಳೆದ ವಾರ ರಸ್ತೆಗೆ ತಾಗಿಕೊಂಡೇ ಅಗೆದು ಮಣ್ಣು ತೆಗೆದ ಪರಿಣಾಮ ರಸ್ತೆಯ ಅಡಿ ಭಾಗದಿಂದ ಮಣ್ಣು ಕುಸಿದಿದೆ. ಇದೀಗ ರಸ್ತೆ ಕುಸಿದು ಬೀಳುವ ಭಿತಿಯಲ್ಲಿದ್ದು ವಾಹನಗಳ ಸಂಚಾರವೂ ಅಪಾಯಕಾರಿಯಾಗಿದೆ. ರಸ್ತೆಯಿಂದ ಇಂತಿಷ್ಟು ಜಾಗ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಬೇಕೆಂಬ ನಿಯಮ ಇರುವಾಗ ರಸ್ತೆಗೆ ತಾಗಿಕೊಂಡು ಮಣ್ಣ ಅಗೆದಿರುವುದು ನಿಯಮದ ಉಲ್ಲಂಘನೆಯಾಗಿದೆ. ಮಳೆಗಾಲದಲ್ಲಿ ರಸ್ತೆಬದಿಯಲ್ಲಿ 20 ಅಡಿಯಷ್ಟು ಅಗೆಯುವಾಗ ಮುಂಜಾಗೃತ ಕ್ರಮಗಳನ್ನು ವಹಿಸಬೇಕು. ಇದ್ಯಾವುದನ್ನೂ ಅನುಸರಿಸದ ಪರಿಣಾಮ ಇದೀಗ ರಸ್ತೆ ಕುಸಿಯುವ ಬೀತಿಯನ್ನು ಎದುರಿಸುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚರಗೊಂಡು ರಸ್ತೆಯನ್ನು ಉಳಿಸುವ ಕೆಲಸ ಮಾಡಬೇಕು.
– ಶಾಹುಲ್ ಹಮೀದ್ ಎಸ್.ಎಚ್., ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ

By suddi9

Leave a Reply

Your email address will not be published. Required fields are marked *