ಬಂಟ್ವಾಳ: ಕಲ್ಲಡ್ಕದಂತಹ ಸೂಕ್ಷ್ಮ ಪ್ರದೇಶದಲ್ಲಿ ಮತ್ತೆ ಘರ್ಷಣೆ ಮರುಕಳಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಲಲಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.ಗುರುವಾರ ಸಂಜೆ ಗಲಭೆಪೀಡಿತ ಕಲ್ಲಡ್ಕ ಪರಿಸರವನ್ನು ಪರಿಶೀಲಿಸಿದ ಬಳಿಕ ಬಂಟ್ವಾಳ ನಗರ ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವು ವರ್ಷಗಳ ಬಳಿಕ ಕಲ್ಲಡ್ಕದಲ್ಲಿ ಘಟನೆ ನಡೆದಿರುವುದು ವಿಷಾದನೀಯ. ಭವಿಷ್ಯದಲ್ಲಿ ಇದು ಮರುಕಳಿಸದಂತೆ ಸಾರ್ವಜನಿಕರು ಕೂಡ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಪ್ರಸ್ತುತ ಕಲ್ಲಡ್ಕ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗೆ ಕಿವಿಕೊಡಬಾರದು, ಈ ರೀತಿ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲಾಗುವುದಿಲ್ಲ. ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವುದನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ, ಘಟನೆಯಂದು ಸ್ಥಳದಲ್ಲಿದ್ದು ,ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ದವೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನಯೊಂದಕ್ಕೆ ಉತ್ತರಿಸಿದರು.
ಪುತ್ತೂರು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಗಾಯಾಳು ರತ್ನಾಕರ ಶೆಟ್ಟಿ ಪರಾರಿಗೆ ಸಂಬಂಧಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಾರೆ. ಕಲ್ಲಡ್ಕದಲ್ಲಿ ಶಾಂತಿ ಮರುಕಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆಗೆ ಮಾರ್ಗದರ್ಶನ ನೀಡಲಾಗುವುದು ಎಂದರು.
ಆರೋಪಿಗಳಿಗೆ ನ್ಯಾಯಾಂಗ ಬಂಧನ : ಗಲಭೆ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಮಾರು ಮೂವತ್ತು ಮಂದಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದರು. ಅವರಲ್ಲಿ 18 ಮಂದಿಯನ್ನು ಬಂಧಿಸಿದ್ದು, ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಐಜಿಪಿ ಹರಿಹರನ್, ಎಸ್ಪಿ ಭೂಷಣ್ ಬೊರಸೆ, ಎಡಿಶನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ರವೀಶ್, ಭಾಸ್ಕರ ಶೆಟ್ಟಿ, ಸಿಐ ಮಂಜಯ್ಯ, ಮಹೇಶ್ ಪ್ರಸಾದ್, ಎಸ್.ಐ. ರಕ್ಷಿತ್, ನಂದಕುಮಾರ್ ರವರು ಎಡಿಜಿಪಿ ಅಗಮನದ ವೇಳೆ ಹಾಜರಿದ್ದರು.. ಈ ಸಂದರ್ಭ ಠಾಣೆಯಲ್ಲಿ ಪೊಲೀಸ್ ಅಧಿಕಾರಗಳ ಚರ್ಚೆನಡೆಸಿದ ಎಡಿಜಿಪಿ ಅಲೋಕ್ ಮೋಹನ್ ಮತ್ತೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ.

